ವಿಶ್ವನಾಥ್ ಆನಂದ್‍ಗೆ ಟಫ್ ಫೈಟ್ ಕೊಟ್ಟ ಕಿಚ್ಚ- 6.65 ಲಕ್ಷ ದೇಣಿಗೆ ಸಂಗ್ರಹ

Public TV
3 Min Read
sudeep

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅವರು ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರಿಗೆ ಚೆಸ್ ಸ್ಪರ್ಧೆಯಲ್ಲಿ ಕಠಿಣ ಸ್ಪರ್ಧೆಯನ್ನೇ ನೀಡಿದ್ದಾರೆ.

ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ನಟನೆಯಲ್ಲಿ ತಮ್ಮದೇ ಅಗಿರುವ ಚಾಪನ್ನು ಮೂಡಿಸಿದ್ದಾರೆ. ಕ್ರಿಕೆಟ್‍ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಚೆಸ್‍ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಕೋವಿಡ್ ಪರಿಹಾರ ನಿಧಿ ಸಂಗ್ರಹಕ್ಕಾಗಿ ಅಕ್ಷಯಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಚೆಸ್.ಕಾಮ್ ಭಾನುವಾರ ಆಯೋಜಿಸಿದ್ದ ಚೆಕ್‍ಮೇಟ್ ಕೋವಿಡ್ ಸೆಲೆಬ್ರಿಟಿ ಆವೃತ್ತಿಯಲ್ಲಿ, ನಟ ಸುದೀಪ್, ರಿತೇಷ್ ದೇಶ್‍ಮುಖ್, ಕ್ರಿಕೆಟಿಗ ಯಜುವೇಂದ್ರ ಚಾಹಲ್ ಸೇರಿದಂತೆ ಕೆಲ ಗಣ್ಯರೊಂದಿಗೆ 30 ನಿಮಿಷಗಳ ಟೈಂಔಟ್‍ನಲ್ಲಿ ಏಕಕಾಲದಲ್ಲಿ ವಿಶ್ವನಾಥನ್ ಆನಂದ್ ಚೆಸ್ ಅಡಿದ್ದಾರೆ. ಇದನ್ನೂ ಓದಿ: ವರ್ಲ್ಡ್​ ಚೆಸ್ ಚಾಂಪಿಯನ್ ಜೊತೆಗೆ ಕಿಚ್ಚನ ಆಟ

ಟೈಂಔಟ್‍ನಲ್ಲಿ ಸುದೀಪ್ ಅವರು ವಿಶ್ವನಾಥನ್ ಆನಂದ್ ಅವರೆದುರು ಸೋತರು. ವಿಶ್ವನಾಥನ್ ಆನಂದ್ ಅವರ ಟೈಮರ್‍ನಲ್ಲಿ 46 ಸೆಕೆಂಡ್‍ಗಳಷ್ಟೇ ಉಳಿದಿತ್ತು. ಆಟದ ಬಳಿಕ ಸ್ಪರ್ಧಿಗಳ ಜೊತೆ ವಿಶ್ವನಾಥನ್ ಆನಂದ್ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಸುದೀಪ್, ನನ್ನ ಹಂತದ ಸ್ಪರ್ಧಿಗಳೊಂದಿಗೆ ಚೆನ್ನಾಗಿ ಆಡುತ್ತೇನೆ. ಇಂತಹ ದಿಗ್ಗಜರ ಜೊತೆ ಆಡುವುದೇ ನಮಗೆ ಸಿಕ್ಕ ದೊಡ್ಡ ಅವಕಾಶ. ಇಲ್ಲಿ ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಎನ್ನುವುದು ಮುಖ್ಯವಲ್ಲ ಎಂದಿದ್ದಾರೆ.

ಯಾರು ಹೆಚ್ಚು ಹೊತ್ತು ವಿಶ್ವನಾಥನ್ ಅವರ ವಿರುದ್ಧ ಕಣದಲ್ಲಿ ಇರುತ್ತಾರೆ ಎನ್ನುವುದು ಮುಖ್ಯ. ಆನ್‍ಲೈನ್ ಚೆಸ್ ಬಗ್ಗೆ ನನಗೇ ಯಾವುದೇ ಮಾಹಿತಿ ಇರಲಿಲ್ಲ. ನಮಗೆ ಸೋಲುವ ಭಯವಿರಲಿಲ್ಲ, ಏಕೆಂದರೆ ನಾವು ಆಡುತ್ತಿರುವುದು ವಿಶ್ವನಾಥನ್ ಆನಂದ್ ಅವರ ವಿರುದ್ಧ. ಈ ಅನುಭವ ಜೀವನಪೂರ್ತಿ ಇರಲಿದೆ. ಈ ಆಟ ಕೇವಲ ಮನರಂಜನೆಗಾಗಿ ಆಗಿರಲಿಲ್ಲ. ಒಂದು ಉದ್ದೇಶ ಇದರ ಹಿಂದೆ ಇತ್ತು ಎಂದು ಸುದೀಪ್ ಹೇಳಿದ್ದಾರೆ.

ಎರಡನೇ ಹಂತದಲ್ಲಿ ವಿಶ್ವನಾಥನ್ ಆನಂದ್ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧವೂ ಆಡಿದರು. ವಿಶ್ವನಾಥನ್ ಆನಂದ್ ಅವರ ಜೀವನದ ಬಗ್ಗೆ ಸಿನಿಮಾ ಆದರೆ ಅದರಲ್ಲಿ ನಟಿಸುತ್ತೀರಾ? ಎನ್ನುವ ಜನರ ಪ್ರಶ್ನೆಗೆ ಉತ್ತರಿಸಿದ ಅಮೀರ್ ಖಾನ್, ಖಂಡಿತವಾಗಿಯೂ..ಇದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು. ಆನ್‍ಲೈನ್‍ನಲ್ಲಿ ನಡೆದ ಈ ಸ್ಪರ್ಧೆಯನ್ನು 20 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, 6.65 ಲಕ್ಷ ದೇಣಿಗೆ ಸಂಗ್ರಹವಾಗಿದೆ.

ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಚೆಸ್ ಗ್ರ್ಯಾಂಡ್‍ಮಾಸ್ಟರ್ ವಿಶ್ವನಾಥನ್ ಅವರ ನಡುವೆ ನಡೆದಿರುವ ರೋಚಕ ಆಟವನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಪರದೆ ಮೇಲೆ, ಮೈದಾನದಲ್ಲಿ ಕಿಚ್ಚನ ಖದರ್ ನೋಡಿದ ಅಭಿಮಾನಿಗಳು ಚಿಸ್‍ನಲ್ಲಿ ಕಿಚ್ಚನ ಆಟವನ್ನು ನೋಡಿ ಫಿದಾ ಆಗಿರುವುದು ಖಂಡಿತಾ ಹೌದು.

Share This Article
Leave a Comment

Leave a Reply

Your email address will not be published. Required fields are marked *