ನವದೆಹಲಿ: ಅಮೆರಿಕದ ದೈತ್ಯ ಔಷಧ ತಯಾರಿಕಾ ಕಂಪನಿ ಫೈಜರ್ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಬಳಸಲು ಇಂಗ್ಲೆಂಡ್ ಸರ್ಕಾರ ಅನುಮತಿ ನೀಡಿದ್ದರೂ ಭಾರತದಲ್ಲಿ ಈ ಲಸಿಕೆ ಸಿಗುವುದಿಲ್ಲ.
ತಾನು ತಯಾರಿಸಿದ ಕೊರೊನಾ ಲಸಿಕೆ ಶೇ. 95ರಷ್ಟು ಪರಿಣಾಮಕಾರಿಯಾಗಿದೆ ಎಂದು ನ.18 ರಂದು ಕಂಪನಿ ಅಧಿಕೃತವಾಗಿ ತಿಳಿಸಿತ್ತು. ಈ ಹೇಳಿಕೆಯ ಬೆನ್ನಲ್ಲೇ ಇಂಗ್ಲೆಂಡ್ ಸರ್ಕಾರ ಮುಂದಿನ ವಾರದಿಂದಲೇ ಲಸಿಕೆ ವಿತರಿಸಲು ಅನುಮತಿ ನೀಡಿದೆ.
Advertisement
ಇಂಗ್ಲೆಂಡ್ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶವಾದ ಭಾರತದಲ್ಲೂ ಈ ಲಸಿಕೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಈ ಲಸಿಕೆ ಭಾರತದಲ್ಲಿ ತಕ್ಷಣವೇ ಸಿಗುವುದಿಲ್ಲ.
Advertisement
Advertisement
ಯಾಕೆ ಸಿಗಲ್ಲ?
ಯಾವುದೇ ಲಸಿಕೆಗೆ ದೇಶದಲ್ಲಿ ಅನುಮತಿ ನೀಡುವ ಮೊದಲು ಅದು ಭಾರತದಲ್ಲಿ ಪ್ರಯೋಗಕ್ಕೆ ಒಳಪಡಬೇಕೆಂದು ನಿಯಮ ಹೇಳುತ್ತದೆ. ಆದರೆ ಫೈಜರ್ ಲಸಿಕೆಯ ಪ್ರಯೋಗ ಭಾರತದಲ್ಲಿ ನಡೆದಿಲ್ಲ. ಭಾರತ ಸರ್ಕಾರ ಕಳೆದ ಆಗಸ್ಟ್‌ನಲ್ಲಿ ಫೈಜರ್ ಕಂಪನಿಯ ಜೊತೆ ಮಾತುಕತೆ ನಡೆಸಿತ್ತು. ಆದರೆ ನಂತರದ ದಿನಗಳಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ಈ ಕಾರಣಕ್ಕೆ ತಕ್ಷಣವೇ ಲಸಿಕೆ ಬಳಕೆಗೆ ಸಿಗುವುದಿಲ್ಲ. ಇದನ್ನೂ ಓದಿ: ಕೊರೊನಾ ಲಸಿಕೆ ವಿತರಣೆ ಹೇಳಿದಷ್ಟು ಸುಲಭವಲ್ಲ – ಏನಿದು ಕೋಲ್ಡ್ ಚೈನ್? ಸವಾಲು ಏನು?
Advertisement
ಸವಾಲು ಏನು?
ಫೈಝರ್ ಲಸಿಕೆಯ ಟ್ರಯಲ್ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ನಡೆದಿದೆ. ಇಲ್ಲಿ ಚಳಿ ಜಾಸ್ತಿ ಹೀಗಾಗಿ ಈ ದೇಶಗಳಲ್ಲಿ ಲಸಿಕೆ ಸಾಗಾಟ ಸಂಗ್ರಹಕ್ಕೆ ಸಮಸ್ಯೆ ಆಗಲಾರದು. ಆದರೆ ಭಾರತದಲ್ಲಿ ಲಸಿಕೆಗೆ ಅವಕಾಶ ಸಿಕ್ಕಿದರೂ ಅದನ್ನು ಸಂಗ್ರಹ ಮಾಡಿ ಸಾಗಿಸುವುದೇ ಬಹಳ ಕಷ್ಟ.
ಲಸಿಕೆಯನ್ನು ಮೈನಸ್ 70 ಡಿಗ್ರಿಯಲ್ಲಿ ಇಡುವುದೇ ದೊಡ್ಡ ಸವಾಲು. ಸಂಗ್ರಹ ಮಾಡಲು ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಬೇಕಾಗುತ್ತದೆ. ಭಾರತದಲ್ಲಿ ಸೂಪರ್ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಎಲ್ಲ ಕಡೆ ಇಲ್ಲ. ಅಷ್ಟೇ ಅಲ್ಲದೇ ವಿಶೇಷ ವಿಮಾನದಲ್ಲಿ ಲಸಿಕೆಯನ್ನು ತಂದು ಡೀಪ್ ಫ್ರೀಜ್ ವಿಮಾನ ನಿಲ್ದಾಣದ ಗೋದಾಮುಗಳಲ್ಲಿ ಇಡಬೇಕು. ಅಲ್ಲಿಂದ ರೆಫ್ರಿಜರೇಟರ್ ಇರುವ ವಾಹನಗಳಲ್ಲಿ ಸಾಗಿಸಬೇಕು. ಒಂದು ಬಾರಿ ಲಸಿಕೆ ಕೇಂದ್ರಕ್ಕೆ ತಲುಪಿದ ನಂತರ ನಿರ್ವಹಣೆ ಮಾಡುವುದು ಕಷ್ಟ. ಈ ಲಸಿಕೆಗಳನ್ನು ಸಾಮಾನ್ಯ ತಾಪಮಾನಕ್ಕೆ ತಂದು 5 ದಿನದೊಳಗೆ ಖಾಲಿ ಮಾಡಬೇಕಾಗುತ್ತದೆ.
ಬೆಲೆ ಎಷ್ಟು?
ಆರೋಗ್ಯವಂತರಿಗೆ ಎರಡು ಡೋಸ್ ನೀಡಬೇಕಾಗುತ್ತದೆ ಎಂದು ಫೈಜರ್ ಕಂಪನಿ ಹೇಳಿದೆ. ಒಂದು ಡೋಸ್ ಬೆಲೆ ಕನಿಷ್ಟ 20 ಡಾಲರ್(1500 ರೂ.) ಆಗಬಹುದು ಎಂದು ಅಂದಾಜಿಸಿದೆ. ಆದರೆ ಸರ್ಕಾರಗಳು ಖರೀದಿ ಮಾಡುವ ಪ್ರಮಾಣದ ಮೇಲೆ ದರ ನಿಗದಿ ಮಾಡಲಾಗುವುದು ಎಂದು ಈ ಹಿಂದೆ ಹೇಳಿತ್ತು. ಹೀಗಾಗಿ ಬ್ರಿಟನ್ ಸರ್ಕಾರಕ್ಕೆ ಎಷ್ಟು ದರಕ್ಕೆ ಲಸಿಕೆ ನೀಡುತ್ತದೆ ಎಂಬುದು ಅಧಿಕೃತವಾಗಿ ತಿಳಿದು ಬಂದಿಲ್ಲ.
ಭಾರತದ ನಡೆ ಏನು?
ತಾಪಮಾನ ಹೆಚ್ಚಿರುವ ದೇಶವಾದ ಭಾರತದಲ್ಲಿ ಫೈಜರ್ ಲಸಿಕೆ ಬಳಕೆಗೆ ಬಹಳ ಸವಾಲು ಇರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರ ಈಗ ಆಕ್ಸ್‌ಫರ್ಡ್ ವಿವಿ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಮತ್ತು ಹೈದರಾಬಾದ್ ಕಂಪನಿ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್ ಸೇರಿದಂತೆ 5 ಲಸಿಕೆಗಳ ಮೇಲೆ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಾಗುತ್ತಿರುವ ಆಕ್ಸ್‌ಫರ್ಡ್ ಲಸಿಕೆ ಕೋವಿಶೀಲ್ಡ್ ಅನ್ನು ಫ್ರಿಡ್ಜ್‌ನಲ್ಲಿ ಇರಿಸಿದರೂ ಯಾವುದೇ ಹಾನಿಯಾಗುವುದಿಲ್ಲ. 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬಹುದು ಎಂದು ಸೀರಂ ತಿಳಿಸಿದೆ.
ಫೈಜರ್ ಲಸಿಕೆ ಹೇಗಿದೆ?
ಜರ್ಮನ್ ಪಾಲುದಾರ ಬಯೋ ಆಂಡ್ ಟೆಕ್ ಜೊತೆ ಅಭಿವೃದ್ಧಿಪಡಿಸಿದ ಫೈಜರ್ ಲಸಿಕೆ ಕ್ಲಿನಿಕಲ್ ಟ್ರಯಲ್ ವೇಳೆ ಎಲ್ಲಾ ವಯೋಮಾನ ಮತ್ತು ಜನಾಂಗೀಯದವರಲ್ಲಿ ಸ್ಥಿರವಾಗಿದ್ದು, ಯಾವುದೇ ಪ್ರಮುಖ ಅಡ್ಡ ಪರಿಣಾಮಗಳಿಲ್ಲ. ಶೇ.95ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿತ್ತು. ಇಂಗ್ಲೆಂಡ್ ಸರ್ಕಾರ ಈಗಾಗಲೇ 4 ಕೋಟಿ ಡೋಸ್‌ಗಳಿಗೆ ಆರ್ಡರ್ ಮಾಡಿದ್ದು 2 ಕೋಟಿ ಜನರಿಗೆ 2 ಡೋಸ್ ನೀಡಬಹುದಾಗಿದೆ. ಆರಂಭದಲ್ಲಿ 1 ಕೋಟಿ ಲಸಿಕೆ ಬರಲಿದ್ದು, ಈ ಪೈಕಿ ಮುಂದಿನ ಕೆಲ ದಿನದಲ್ಲಿ 8 ಲಕ್ಷ ಲಸಿಕೆ ಇಂಗ್ಲೆಂಡ್‌ಗೆ ಬರಲಿದೆ.