ವಿಶ್ವದ ಮೊದಲ ಕೊರೊನಾ ಲಸಿಕೆ ಅಭಿವೃದ್ಧಿ – ರಷ್ಯಾ ಅಧ್ಯಕ್ಷ ಪುಟಿನ್‌ ಘೋಷಣೆ

Public TV
2 Min Read
vladimir putin

– ಲಸಿಕೆ ಹಾಕಿಸಿಕೊಂಡ ಪುಟಿನ್‌ ಪುತ್ರಿ
– ಆಗಸ್ಟ್‌ ಅಂತ್ಯಭಾಗದಲ್ಲಿ ಲಸಿಕೆ ಉತ್ಪಾದನೆ

ಮಾಸ್ಕೋ: ಕೊರೊನಾ ಸಂಕಷ್ಟ ನಡುವೆ ಇಡೀ ವಿಶ್ವಕ್ಕೆ ಶುಭ ಸುದ್ದಿಯೊಂದು ಕೇಳಿ ಬಂದಿದೆ.‌ ವಿಶ್ವದ ಮೊದಲ‌ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಕಟಿಸಿದ್ದಾರೆ.

ಮಾನವರ ಮೇಲೆ ಮೂರು ಹಂತಗಳ ಪ್ರಯೋಗ ಅಂತ್ಯವಾಗಿದ್ದು ಉತ್ತಮ ಫಲಿತಾಂಶ ಬಂದಿದೆ. ಲಸಿಕೆ ಪಡೆದವರ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದ ಹಿನ್ನೆಲೆಯಲ್ಲಿ ಲಸಿಕೆಯನ್ನು ಅಧಿಕೃತವಾಗಿ ರಷ್ಯಾ ಆರೋಗ್ಯ ಸಚಿವಾಲಯ ನೋಂದಣಿ ಮಾಡಿಕೊಂಡಿದೆ ಎಂದು ಪುಟಿನ್ ಹೇಳಿದ್ದಾರೆ.

CORONA VIRUS 4

ರಷ್ಯಾ ರಕ್ಷಣಾ ಸಚಿವಾಲಯ ಮತ್ತು ಮಾಸ್ಕೋದ ಗಮೇಲಿಯಾ ಸಂಶೋಧನಾ ಸಂಸ್ಥೆ ಜಂಟಿಯಾಗಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಸದ್ಯ ನೋಂದಣಿಯಾಗಿರುವ ಲಸಿಕೆಯನ್ನು ಮೊದಲ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪುತ್ರಿ ಗೆ ನೀಡಲಾಗಿದೆ.

ಜೂನ್ 18 ರಿಂದ‌ ಕ್ಲಿನಿಕಲ್ ಪರೀಕ್ಷೆಗಳನ್ನು ಆರಂಭಿಸಲಾಗಿತ್ತು. ಜೂನ್ 18 ರಂದು ಮೊದಲ ಹಂತದಲ್ಲಿ 18 ಮಂದಿಯ ಮೇಲೆ ಹಾಗೂ ಜೂನ್ 23 ರಂದು 20 ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಪೈಕಿ ಮೊದಲ ಗುಂಪು ಜುಲೈ 15 ಮತ್ತು ಎರಡನೇ ಗುಂಪು ಜುಲೈ 20 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಎರಡು ಹಂತಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳದ ಕಾರಣ ಮೂರನೇ ಹಂತದಲ್ಲಿ 38 ಮಂದಿಯ ಮೇಲೆ ಪರೀಕ್ಷೆ ನಡೆಸಿ ರಷ್ಯಾ ಈಗ ಯಶಸ್ವಿಯಾಗಿದೆ.

CORONA VIRUS 1

ಅಗಸ್ಟ್ ತಿಂಗಳ ಅಂತ್ಯ ಭಾಗದಿಂದ ಇದರ ಲಸಿಕೆ ಉತ್ಪಾದನೆ ಕಾರ್ಯ ಆರಂಭವಾಗಲಿದ್ದು ಸೆಪ್ಟೆಂಬರ್ ವೇಳೆಗೆ ಮೊದಲ ಹಂತದ ಉತ್ಪಾದನೆ ಸಿದ್ದವಾಗಲಿದೆ. ಅಕ್ಟೋಬರ್ ವೇಳೆಗೆ ರಷ್ಯಾದಲ್ಲಿ ಸ್ಥಳೀಯ ಬಳಕೆಗೆ ಈ ವ್ಯಾಕ್ಸಿನ್ ಸಿಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಈ ವಾರ ದೇಶವು ವಿಶ್ವದ ಮೊದಕ ಕೋವಿಡ್ ಲಸಿಕೆ ಬಿಡುಗಡೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ನೆರವೇರಿಸಲಿದೆ ಎಂದು ಒಲೆಗ್ ಗ್ರಿಡ್ನೆವ್ ಹೇಳಿರುವುದಾಗಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಆಗಸ್ಟ್ 3 ರಂದು, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಲ್ಲಿ ಭಾಗವಹಿಸುವವರ ‘ಅಂತಿಮ ವೈದ್ಯಕೀಯ ಪರೀಕ್ಷೆ’ ಬರ್ಡೆಂಕೊ ಮುಖ್ಯ ಮಿಲಿಟರಿ ಕ್ಲಿನಿಕಲ್ ಆಸ್ಪತ್ರೆಯಲ್ಲಿ ನಡೆದಿತ್ತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು. ಲಸಿಕೆ ಪಡೆದುಕೊಂಡ ಎಲ್ಲಾ ಸ್ವಯಂಸೇವಕರು ಸ್ಪಷ್ಟ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊಂದಿದ್ದಾರೆಂದು ಫಲಿತಾಂಶಗಳು ಸ್ಪಷ್ಟವಾಗಿ ಬಂದಿದೆ.  ಸ್ವಯಂಸೇವಕರ ಕೆಲಸದಲ್ಲಿ ಯಾವುದೇ ಅಡ್ಡಪರಿಣಾಮಗಳು ಅಥವಾ ಅಸಹಜತೆ ಕಾಣಿಸಿಲ್ಲ ಎಂದು ಸಚಿವಾಲಯ ತಿಳಿಸಿತ್ತು.

CORONA VIRUS 1 3

ಭಾರತಕ್ಕೆ ರಷ್ಯಾ ಲಸಿಕೆ?
ರಷ್ಯಾದಲ್ಲಿ ಅಭಿವೃದ್ಧಿಗೊಂಡಿರುವ ಲಸಿಕೆ ಭಾರತಕ್ಕೂ ಆಮದಾಗುವ ಸಾಧ್ಯತೆಗಳಿದೆ. ಅದಕ್ಕೂ ಮೊದಲು ರಷ್ಯಾ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಬೇಕಿದೆ‌.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉತ್ತಮ ಸಂಬಂಧ ಹೊಂದಿರುವ ಹಿನ್ನಲೆ ಭಾರತಕ್ಕೂ ಆಮದಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಬಳಕೆಗೂ ಮುನ್ನ ರಷ್ಯಾ ವ್ಯಾಕ್ಸಿನ್ ಕ್ಲಿನಿಕಲ್ ಪರೀಕ್ಷೆಗಳಲ್ಲಿಗೆ ಮತ್ತೊಮ್ಮೆ ಒಳಪಡಬೇಕಿದ್ದು ಭಾರತದಲ್ಲೂ ಯಾವುದೇ ಅಡ್ಡ ಪರಿಣಾಮಗಳು ಬೀರದಿದ್ದಲ್ಲಿ ಅಧಿಕೃತ ಬಳಕೆಗೆ ಅವಕಾಶ ನೀಡುವ ಸಾಧ್ಯತೆಗಳಿದೆ. ಈ ಎಲ್ಲ ಪ್ರತಿಕ್ರಿಯೆಗಳು ವರ್ಷದ ಕೊನೆಯಲ್ಲಿ ನಡೆಯಬಹುದು ಎಂದು ಹೇಳಲಾಗುತ್ತಿದೆ.

modi putin

Share This Article
Leave a Comment

Leave a Reply

Your email address will not be published. Required fields are marked *