– ಮದುವೆ ಮನೆಯಲ್ಲಿ ಸಾವಿರಾರು ಮಂದಿ ಜಮಾವಣೆ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ, ಇನ್ನೊಂದೆಡೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡುತ್ತಲೇ ಇದೆ. ಆದರೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿನ ಮದುವೆ ಮನೆಯಲ್ಲಿ ಕುಸ್ತಿಪಟು ದಿ ಗ್ರೇಟ್ ಖಲಿ ನೋಡಲು ಸಾವಿರಾರು ಮಂದಿ ಜಮಾಯಿಸಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಗ್ರಾಮದ ವಜ್ರದ ಉದ್ಯಮಿ ಹಸನ್ ರಾಜಾ ಪುತ್ರಿಯ ವಿವಾಹ ಹಾಗೂ ಹಸನ್ ರಾಜಾರ ಮನೆಯ ಗೃಹ ಪ್ರವೇಶಕ್ಕೆ ಕುಸ್ತಿಪಟು ಖಲಿ ಆಗಮಿಸಿದ್ದರು. ತಾವು ಆಗಮಿಸುತ್ತಿರುವ ಕುರಿತು ಸ್ವತಃ ಖಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ತಿಳಿಯುತ್ತಿದ್ದಂತೆ ಗೌರಿಬಿದನೂರು ಸೇರಿದಂತೆ ಸುತ್ತಲ ತಾಲೂಕಿನ ಸಾವಿರಾರು ಮಂದಿ ಮದುವೆ ಮನೆ ಬಳಿ ಜಮಾಯಿಸಿದ್ದರು.
ಕೊರೊನಾ ಎರಡನೇ ಅಲೆ ಆತಂಕದಿಂದ ಸರ್ಕಾರ ಅದ್ಧೂರಿ, ಜನಜಂಗುಳಿ ವಿವಾಹಗಳಿಗೆ ಬ್ರೇಕ್ ಹಾಕಿ ಕೇವಲ 500 ಮಂದಿ ಭಾಗವಹಿಸಬೇಕೆಂದು ಆದೇಶ ಮಾಡಿದೆ. ಆದರೆ ಈ ವಿವಾಹಕ್ಕೆ ಸಾವಿರಾರು ಜನ ಸೇರಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಕೊರೊನಾ ನಿಯಮಗಳನ್ನು ಬ್ರೇಕ್ ಮಾಡಲಾಗಿದೆ.