ಶಿವಮೊಗ್ಗ: ಮಹಾಮಾರಿ ಕೊರೊನಾ ವೈರಸ್ ನಿಂದ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈಗಲೂ ವೃದ್ಧರು, ಯುವಕರು ಎನ್ನದೇ ಹಲವು ಮಂದಿ ಬಲಿಯಾಗುತ್ತಿದ್ದಾರೆ. ಅಂತೆಯೇ ಇದೀಗ ನವವಿವಾಹಿತೆಯೊಬ್ಬರು ಮಹಾಮಾರಿಯಿಂದ ಜೀವ ಕಳೆದುಕೊಂಡಿದ್ದು, ಮದುವೆ ಖುಷಿಯಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಹೌದು. ವಿವಾಹವಾದ ನಾಲ್ಕೇ ದಿನಕ್ಕೆ ನವವಿವಾಹಿತೆ ಪೂಜಾ (24) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಹೀಗಾಗಿ ಇದೀಗ ಸಂಭ್ರಮವಿದ್ದ ಮನೆಯಲ್ಲಿ ದುಃಖ ಮಡುಗಟ್ಟಿದೆ. ಶಿವಮೊಗ್ಗದ ನಿದಿಗೆಯ ಪೂಜಾ ಹಾಗೂ ಹರಿಗೆಯ ಮಹೇಶ್ ಜೊತೆ ಸೋಮವಾರ ವಿವಾಹ ನಡೆದಿತ್ತು. ಸೋಮವಾರ ವಿವಾಹ ಗುರುವಾರ ಸಂಜೆ ಪೂಜಾ ಮೃತಪಟ್ಟಿದ್ದಾರೆ.
ವಿವಾಹವಾದ ಎರಡೇ ದಿನಕ್ಕೆ ಪೂಜಾಗೆ ಮೈಕೈ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ಮಲವಗೊಪ್ಪದ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು. ಪೂಜಾ ಮೃತಪಟ್ಟ ನಂತರ ವೈದ್ಯರು ಕೊರೊನಾ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಒಟ್ಟಿನಲ್ಲಿ ಇದೀಗ ಹೊಸ ಜೀವನದ ಕನಸು ಕಾಣುತ್ತಿದ್ದ ಯುವತಿಯನ್ನು ಹೆಮ್ಮಾರಿ ಬಲಿಪಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.