ಹಾಸನ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಹಾಸನದಲ್ಲಿ ಸಾರಿಗೆ ಸಿಬ್ಬಂದಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ವಿರೋಧ ಪಕ್ಷದಲ್ಲಿದ್ದಾಗ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಅವರೇ ಅಧಿಕಾರಕ್ಕೆ ಬಂದಾಗ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಅಂತಾರೆ. ಹಾಗಾದ್ರೆ ಆಗೇನು ಅವರು ಲವ್ ಲೆಟರ್ ಬರೆದಿದ್ರಾ ಎಂದು ಕಿಡಿಕಾರಿದ್ದಾರೆ.
ಬೇರೆ ನಿಗಮಗಳಿಗೆ ಹೋಲಿಸಿ ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಅಂತಾರೆ. ಆದರೆ ಅವರಿಗೆ ಕೊಡುವ ಸವಲತ್ತು, ಸಂಬಳ ನಮಗೆ ಕೊಡುತ್ತಿದ್ದಾರಾ. ನೈಟ್ ಡ್ಯೂಟಿ ಇದ್ದಾಗ ಮಲಗಲು ಜಾಗವಿಲ್ಲದೆ ನೆಲದ ಮೇಲೆ ಮಲಗಿದ್ದೇವೆ. ಬಸ್ ಸೀಟ್‍ಮೇಲೆ ಕಷ್ಟಪಟ್ಟು ಮಲಗಿದ್ದೇವೆ. ಇದೆಲ್ಲ ಯಾಕೆ ಸರ್ಕಾರಕ್ಕೆ ಅರ್ಥ ಆಗಲ್ಲ. ದಯವಿಟ್ಟು ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಕೈಮುಗಿದು ಮನವಿ ಮಾಡಿದ್ದಾರೆ.
ಇಂದು ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಿಗಲ್ಲ, ರಾಜ್ಯಾದ್ಯಂತ ಸರ್ಕಾರಿ ಬಸ್ಸುಗಳ ಓಡಾಟ ಇರಲ್ಲ. ನಿನ್ನೆಯಿಂದ ಆರಂಭ ಆಗಿರುವ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಯ ಪ್ರತಿಭಟನೆ ಇಂದು ಕೂಡ ಮುಂದುವರಿಯಲಿದೆ. ಹೀಗಾಗಿ ಈ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್‍ಗಳು ಶನಿವಾರವೂ ರೋಡಿಗಿಳಿಯಲ್ಲ.