ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಗಳು ನಡೆಯುತ್ತಿದ್ದು, ಸಿಎಂ ಬದಲಾವಣೆಯ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಈ ನಾಯಕತ್ವ ಬದಲಾವಣೆಯ ಆಟಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನನ್ನ ಆದ್ಯತೆ ಕೋವಿಡ್ ನಿಯಂತ್ರಣಕ್ಕಷ್ಟೇ ಆಗಿದೆ. ಜನರ ಹಿತ ಕಾಪಾಡುವುದೇ ನನ್ನ ಮೊದಲ ಆದ್ಯತೆ. ಬೇರೆ ವಿಷಯ ನನ್ನ ಮುಂದೆ ಇಲ್ಲ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಟ್ಟರು.
ದೆಹಲಿಗೆ ಹೋಗಿ ಬಂದವರಿಗೆ ಈಗಾಗಲೇ ಉತ್ತರ ಸಿಕ್ಕಿದೆ. ಕೋವಿಡ್ ಎದುರಿಸುವುದು ಮೊದಲ ಕೆಲಸ. ಬೇರೆ ಯಾವುದರ ಬಗ್ಗೆಯೂ ನನ್ನ ಗಮನ ಇಲ್ಲ. ಒಟ್ಟಾಗಿ ಸಚಿವರು, ಶಾಸಕರು ಕೋವಿಡ್ ಎದುರಿಸಬೇಕು ಎಂದರು.
ಶಾಸಕಾಂಗ ಪಕ್ಷದ ಸಭೆ ನಡೆಸುವ ವಿಚಾರದ ಬಗ್ಗೆ ಕೇಳಿದಾಗ ಸಭೆ ಬಗ್ಗೆ ನಿಮ್ಮ ಜೊತೆ ಚರ್ಚಿಸುವ ಅಗತ್ಯ ಇಲ್ಲ ಎಂದು ಹೇಳುವ ಮೂಲಕ ಸಿಎಂ ಗರಂ ಆದರು.