ಬೆಳಗಾವಿ: ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ಥವ್ಯವಸ್ಥವಾಗಿದ್ದು, ನದಿಗಳ ಒಳಹರಿವು ಹೆಚ್ಚಾಗಿ ರಸ್ತೆಗಳು ಬಂದ್ ಆಗಿವೆ. ಇದರ ಮಧ್ಯೆಯೇ ಸಕ್ಕರೆ ಸಾಗಿಸುತ್ತಿದ್ದ ಲಾರಿ ಮೊಗಚಿ ಬಿದ್ದಿದೆ.
ಬೆಳಗಾವಿ ತಾಲೂಕಿನ ಸುತಗತ್ತಿ ಗ್ರಾಮದ ಸಮೀಪ ತಡರಾತ್ರಿ ಘಟನೆ ನಡೆದಿದ್ದು, ಮಹಾರಾಷ್ಟ್ರದ ಓಲಂ ಸಕ್ಕರೆ ಕಾರ್ಖಾನೆಯಿಂದ 300 ಚೀಲ ಸಕ್ಕರೆ ಹೊತ್ತು ಲಾರಿ ರಾಜ್ಯಕ್ಕೆ ಆಗಮಿಸುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಕಷ್ಟದಲ್ಲಿದ್ದ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವುದನ್ನು ಬಿಟ್ಟು, ಜನ ಲಾರಿಯಲ್ಲಿದ್ದ ಸಕ್ಕರೆ ಹೊತ್ತೊಯ್ದಿದ್ದಾರೆ. 300 ಚೀಲಗಳ ಪೈಕಿ 190 ಚೀಲ ಸಕ್ಕರೆಯನ್ನು ಸ್ಥಳೀಯರು ಎಗಿರಿಸಿದ್ದಾರೆ.
Advertisement
Advertisement
ಲಾರಿಯ ಕ್ಲೀನರ್ ಸಹಾಯದಿಂದ ಚಾಲಕನನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಕ್ಲೀನರ್ ಮರಳಿ ಅಪಘಾತ ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿಯಲ್ಲಿದ್ದ 190 ಸಕ್ಕರೆ ಚೀಲ ಮಾಯವಾಗಿವೆ. ಘಟನಾ ಸ್ಥಳಕ್ಕೆ ಕಾಕತಿ ಠಾಣೆಯ ಪಿಎಸ್‍ಐ ಶ್ರಿಶೈಲ ಕೌಜಲಗಿ ಭೇಟಿ ನೀಡಿದ್ದು, ಸಕ್ಕರೆ ಮರಳಿಸುವಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಸಕ್ಕರೆ ಚೀಲ ಮರಳಿಸದಿದ್ದಲ್ಲಿ ಮನೆ ಮನೆಗೆ ತೆರಳಿ ಶೋಧ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಹೊರವಲಯದ ಕಾಕತಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.