-ರಾಜಕೀಯ ಪ್ರಭಾವಕ್ಕೆ ಒಳಗಾಗದೇ ನಡೆಸಲಿ
ಬೆಂಗಳೂರು: ಯೋಗೇಶ್ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ. ಇದೇ ವೇಳೆ ಪ್ರಕರಣದ ವಿಚಾರವಣೆಯನ್ನು ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಸಿಬಿಐ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಕೆ, ಯಾವುದೇ ಹಳೆಯ ಪ್ರಕರಣವನ್ನು ತನಿಖೆ ನಡೆಸಿ ಕ್ರಮಕೈಗೊಳ್ಳಲು ಮುಂದಾದರೇ ರಾಜಕೀಯ ನಾಯಕರಾದ ನಾವು ಅದನ್ನು ರಾಜಕೀಯ ಪ್ರೇರಿತ ಎಂದು ಹೇಳಿ ಶೆಲ್ಟರ್ ಪಡೆದುಕೊಳ್ಳಲು ಯತ್ನಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಯೋಗೇಶ್ ಗೌಡ ಪ್ರಕರಣದಲ್ಲಿ ಸಾರ್ವಜನಿಕವಾಗಿ ಹಲವಾರು ಗುಮಾನಿ ಇತ್ತು. ಬಿಜೆಪಿ ಸರ್ಕಾರ ಬಂದು ತನಿಖೆಗೆ ಕೊಟ್ಟಿತ್ತು. ಪ್ರಕರಣದಲ್ಲಿ ನಿಜವಾದ ಸತ್ಯಾಸತ್ಯ ಹೊರ ಬರಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ತನಿಖೆ ಮಾಡಬೇಕು. ಆದರೆ ನನಗೆ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರಲು ಹೊರಟಿದ್ರಾ ಎಂಬುವುದು ನನಗೆ ಗೊತ್ತಿಲ್ಲ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಮಾತ್ರ ತಿಳಿದಿರುತ್ತದೆ ಎಂದರು.
ಇದೇ ವೇಳೆ ಉಪಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನಿಡಿದ ಎಚ್‍ಡಿಕೆ, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಚುನಾವಣೆಯಲ್ಲಿ ಗೆಲುವು ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆ ಫಲಿತಾಂಶದ ನಂತರ ಸಿಎಂ, ವಿಪಕ್ಷ ಸ್ಥಾನ ಬದಲಾಗುತ್ತೆ ಅಂತಾ ಚರ್ಚೆ ಆಗುತ್ತಿದೆ. ಸಿಎಂ ಪುತ್ರ 25 ಸಾವಿರ ಮತದಲ್ಲಿ ಗೆದ್ದಿದ್ದೇವೆ ಅಂತಾರೆ. ಇಬ್ಬರ ಮಾತು ಕೇಳಿದ್ರೆ ನಾವು ಮೂರನೇ ಸ್ಥಾನಕ್ಕೆ ಬತ್ತೀವಾ ಅನ್ನಿಸುತ್ತಿದೆ. ಯಾರು ಏನೇ ಹೇಳಲಿ, ಏನೇ ಮಾಡಿ ಶಿರಾದಲ್ಲಿ ನಾವು ಗೆಲ್ತೀವಿ. ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆರ್‍ಆರ್ ನಗರದಲ್ಲಿ ನಮ್ಮ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದು, ಆರ್.ಆರ್. ನಗರದಲ್ಲಿ ಗೆಲುವಿನ ಹತ್ತಿರಕ್ಕೆ ಹೋಗ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಬಿಐ ಬಿಜೆಪಿ ಸರ್ಕಾರದ ರಾಜಕೀಯ ದಾಳವಾಗಿದೆ: ಡಿಕೆಶಿ