ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಜನವರಿ 22ರ ವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.
ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ಮತ್ತೆ ಬಂಧನದ ಅವಧಿ ವಿಸ್ತರಣೆ ಮಾಡಿ ಆದೇಶಿಸಿದೆ. ವಿನಯ್ ಕುಲಕರ್ಣಿ ಕಳೆದ 3 ತಿಂಗಳಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದು, ಜಾಮೀನು ಅರ್ಜಿ ಸಹ ಧಾರವಾಡ ಹೈಕೋರ್ಟ್ ನಲ್ಲಿ ತಿರಸ್ಕಾರಗೊಂಡಿದೆ.
ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರ ನ್ಯಾಯಾಂಗ ಬಂಧನ ಸಹ ಫೆಬ್ರವರಿ 10ಕ್ಕೆ ವಿಸ್ತರಣೆ ಮಾಡಿ ಸಿಬಿಐ ನ್ಯಾಯಾಲಯ ಆದೇಶ ಮಾಡಿದೆ. ಈಗಾಗಲೇ ಸಿಬಿಐ ವಿನಯ್ ಕುಲಕರ್ಣಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ವಿನಯ್ ಪರ ವಕೀಲರು ಸುಪ್ರೀಂ ಕೊರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕಿತ್ತು. ಆದರೆ ಧಾರವಾಡ ಸಿಬಿಐ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆದ ಕಾರಣ ಇಲ್ಲೇ ಜಾಮೀನು ಅರ್ಜಿ ಹಾಕುವ ಸಾಧ್ಯತೆ ಇದೆ.