ಹಾಸನ: ಸ್ನೇಹಿತನ ಜೊತೆ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದ ನಿವೃತ್ತ ಯೋಧನ ಮೇಲೆ ಮರದ ರೆಂಬೆ ಬಿದ್ದು ಸಾವನ್ನಪ್ಪಿದ ಮನಕಲಕುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.
ಮಂಡ್ಯದ ಮೂಲದ ನಿವೃತ್ತ ಯೋಧ ಆರ್.ಎಲ್.ಪಟೇಲ್ (35) ಸಾವನ್ನಪ್ಪಿದ್ದು, ಘಟನೆಯ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಕಲೇಶಪುರ ಪಟ್ಟಣದ ಬಿ.ಮ್.ರಸ್ತೆಯಲ್ಲಿರುವ ಶ್ರೀ ಗಂಧ ಹೋಟೆಲ್ ಮುಂಭಾಗ ಮರದ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ನಿವೃತ್ತ ಯೋಧ ಆರ್.ಎಲ್.ಪಟೇಲ್ ಸ್ನೇಹಿತರೊಡನೆ ಸಕಲೇಶಪುರಕ್ಕೆ ಆಗಮಿಸಿದ್ದರು. ಈ ವೇಳೆ ಸಮೀಪದ ಅಂಗಡಿಯೊಂದರಲ್ಲಿ ಕಾಫಿ ಪುಡಿ ತೆಗೆದುಕೊಂಡು ಹಿಂದಿರುಗುವಾಗ ಮರದ ರೆಂಬೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಮರದ ಕೊಂಬೆ ಸರಿಸಿ ಅಂಬುಲೆನ್ಸ್ ಮುಖಾಂತರ ಪಟೇಲ್ ಅವರನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಟೇಲ್ ಸಾವನ್ನಪ್ಪಿದ್ದಾರೆ. ಕಣ್ಣೆದುರೇ ಗೆಳೆಯನ ಸಾವು ಕಂಡು ಜೊತೆಯಲ್ಲಿದ್ದ ಸ್ನೇಹಿತ ಕಂಗಾಲಾಗಿದ್ದಾರೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.