– ಗಲಾಟೆಗೆ ಕಾಂಗ್ರೆಸ್ ಪ್ರಚೋದನೆಯೇ ಕಾರಣ
– ಕಾಂಗ್ರೆಸ್ ವಿಲನ್ ರೀತಿ ವರ್ತಿಸಿದೆ
ಶಿವಮೊಗ್ಗ: ವಿಧಾನ ಪರಿಷತ್ ನಲ್ಲಿ ನಡೆದ ಇಂದಿನ ಘಟನೆ ಯಾರಿಗೂ ಶೋಭೆ ತರುವಂತಹದ್ದಲ್ಲ, ಇಂತಹ ಘಟನೆ ನಡೆಯಬಾರದಿತ್ತು. ಈ ಘಟನೆ ಯಾರಿಗೂ ಮರ್ಯಾದೆ, ಗೌರವ ತರುವಂತಹದ್ದಲ್ಲ. ನನಗೂ ಅತ್ಯಂತ ನೋವು ತರಿಸಿದೆ ಎಂದು ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಬೇಸರ ವ್ಯಕ್ತಪಡಿಸಿದರು.
Advertisement
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಂದು ನಡೆದ ಘಟನೆಯಲ್ಲಿ ಮೂರೂ ಪಕ್ಷದವರದ್ದು ತಪ್ಪಿದೆ. ಆದರೆ ಕಾಂಗ್ರೆಸ್ ಪ್ರಚೋದನೆಯಿಂದಾಗಿ ಇಂತಹ ಘಟನೆ ಪರಿಷತ್ ನಲ್ಲಿ ನಡೆದು ಹೋಗಿದೆ. ಪರಿಷತ್ ಗೆ ತನ್ನದೇಯಾದ ಗೌರವ ಇದೆ. ರಾಜ್ಯದ ಜನತೆ ಈ ಘಟನೆಯನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಇಂದಿನ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ಸದಸ್ಯರ ಬೆಂಬಲ ಇಲ್ಲ. ಸದಸ್ಯರ ವಿಶ್ವಾಸ ಇಲ್ಲ ಎಂದ ಮೇಲೆ ಅವರು ಆ ಸ್ಥಾನದಲ್ಲಿಯೇ ಕುಳಿತುಕೊಳ್ಳಬಾರದು. ನಾನು ಸಭಾಪತಿ ಆದ ಸಂದರ್ಭದಲ್ಲಿ ಸಹ ಇಂತಹ ಪ್ರಸಂಗ ಎದುರಾಗಿತ್ತು. ಆದರೆ ನಾನು ಈ ರೀತಿ ನಡೆದುಕೊಳ್ಳದೆ ಉಪ ಸಭಾಪತಿಯನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಿದೆ. ನಂತರ ವಿಶ್ವಾಸಮತಯಾಚನೆಯಲ್ಲಿ ಗೆದ್ದ ನಂತರ ಮತ್ತೆ ಸಭಾಪತಿ ಸ್ಥಾನ ಅಲಂಕರಿಸಿದೆ ಎಂದರು.
Advertisement
Advertisement
ಕಾಂಗ್ರೆಸ್ ನವರು ಎಲ್ಲ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಿರುವ ಕಾರಣ ಹತಾಶರಾಗಿದ್ದಾರೆ. ಈಗಾಗಿಯೇ ಕಾಂಗ್ರೆಸ್ ಕುತಂತ್ರದಿಂದಾಗಿ, ಪ್ರಚೋದನೆಯಿಂದಾಗಿ ಪರಿಷತ್ ನಲ್ಲಿ ಇಂತಹ ಘಟನೆ ನಡೆದಿದೆ. ಕಾಂಗ್ರೆಸ್ ನವರು ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಬಹಳಷ್ಟು ಬಾರಿ ತೆಗೆದುಕೊಂಡಿದ್ದಾರೆ. ಘಟನೆಯಿಂದಾಗಿ ರಾಜ್ಯದ ಜನಕ್ಕೆ ರಾಜಕಾರಣಿಗಳ ಬಗ್ಗೆ ತಿರಸ್ಕಾರ ಭಾವನೆ ಮೂಡಿದೆ. ಇಂದಿನ ಘಟನೆಯಲ್ಲಿ ಕಾಂಗ್ರೆಸ್ ವಿಲನ್ ರೀತಿ ವರ್ತಿಸಿದೆ. ಕಾಂಗ್ರೆಸ್ ಮೂಲ ಸಂಸ್ಕೃತಿ ಅಂದರೆ ನಾವು ದೇಶ ಆಳುವುದಕ್ಕೆ ಇರೋರು, ಏಕ ಚಕ್ರಾಧಿಪತ್ಯ ಧೋರಣೆ ವಂಶಪಾರಂಪರ್ಯ ಹಕ್ಕು ಎಂದುಕೊಂಡಿದ್ದಾರೆ ಎಂದು ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.