– ಪತ್ರಕರ್ತರ ಪೆನ್, ಕ್ಯಾಮೆರಾ ಮೇಲೆ ಬಂದೂಕಿನ ನೆರಳಿದೆ
ಧಾರವಾಡ: ಪ್ರಧಾನಿಗಳು ಕೃಷಿ ಉತ್ಪನಗಳನ್ನ ಎಪಿಎಂಸಿ ಬಿಟ್ಟು ಎಲ್ಲಿ ಬೇಕಾದ್ರೂ ಮಾರಬಹುದು ಎಂದು ಹೇಳುತ್ತಾರೆ. ಹಾಗಾದ್ರೆ ಬೆಂಗಳೂರಿನಲ್ಲಿರುವ ವಿಧಾನಸೌಧದಲ್ಲೊಂದು ಅದಾನಿ ಕೌಂಟರ್ ತೆರೆಯಿರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ರೈತ ಮುಖಂಡ ರಾಕೇಶ್ ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿ 60 ದಿನಗಳಿಂದ ದೆಹಲಿ ಹೋರಾಟ ಬೆಂಬಲಿಸಿ ನಡೆದಿದ್ದ ರೈತ ಹಿತರಕ್ಷಣಾ ಪರಿವಾರದ ಧರಣಿ ಮುಕ್ತಾಯಗೊಳಿಸಿ ಮಾತನಾಡಿದ ಅವರು, ಮಾಧ್ಯಮದವರು ನಮ್ಮ ಬಗ್ಗೆ ಬರೆಯುತ್ತಿಲ್ಲ ಅಂತಾ ನಮಗೆ ಅನಿಸುತ್ತಿದೆ. ಆದರೆ ಅವರ ಮೇಲೆಯೇ ನಿರ್ಬಂಧಗಳನ್ನು ಹಾಕಲಾಗುತ್ತಿದೆ ಎಂದರು. ಸಾಮಾಜಿಕ ಜಾಲತಾಣಗಳಿಗೂ ಆಜಾದಿ ಕೊಡಿಸಬೇಕಿದೆ, ದೇಶಕ್ಕೆ ಹೊಸ ದಿಕ್ಕು ತೋರಿಸಬೇಕಾದ ಅಗತ್ಯ ಇದೆ ಎಂದ ಟಿಕಾಯತ್, ಇದಕ್ಕಾಗಿ ಹೊಸ ವ್ಯವಸ್ಥೆ ಮಾಡಬೇಕಿದೆ ಎಂದರು.
ದೇಶದಲ್ಲಿ ಮಾಧ್ಯಮದ ಆಜಾದಿಯ ಪ್ರಶ್ನೆ ಉದ್ಭವಿಸಿದೆ, ದೇಶದಲ್ಲಿ ಪೆನ್ ಮತ್ತು ಕ್ಯಾಮೆರಾ ಮೇಲೆ ಬಂದೂಕಿನ ನೆರಳಿದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಆತಂಕ ವ್ಯಕ್ತಪಡಿಸಿದರು.
ಎಲ್ಲ ರಾಜ್ಯದ ರಾಜಧಾನಿಗಳನ್ನು ಟ್ರ್ಯಾಕ್ಟರ್ ಗಳಿಂದ ಘೇರಾವ್ ಮಾಡಬೇಕಿದೆ. ಟ್ರ್ಯಾಕ್ಟರ್ ಎದುರಿಗೆ ಬಂಪರ್ ಗಳು ಇರಲೇಬೇಕು, ಬ್ಯಾರಿಕೇಡ್‍ಗಳನ್ನು ಹಾಕಿದ್ರೆ ಅವುಗಳನ್ನು ಟ್ರ್ಯಾಕ್ಟರ್ ನಿಂದ ತೆಗೆಯಬೇಕು. ಎಪಿಎಂಸಿ ಬಿಟ್ಟು ಎಲ್ಲಿ ಬೇಕಾದರೂ ಕೃಷಿ ಉತ್ಪನ್ನ ಮಾರಬಹುದು ಅಂತಾ ಪ್ರಧಾನಿ ಹೇಳಿದ್ದಾರೆ. ಹಾಗಾದರೆ ಬೆಂಗಳೂರಿನ ವಿಧಾನಸಭೆಯಲ್ಲೊಂದು ಅದಾನಿ ಕೌಂಟರ್ ತೆರೆದು ಬಿಡಿ ಎಂದು ಕಿಡಿಕಾರಿದರು.