– ಮಾಜಿ ಸಿಎಂ ಹಾಡಿಹೊಗಳಿದ ಜೆಡಿಎಸ್ ಶಾಸಕ
ಮಂಡ್ಯ: ಸಿದ್ದರಾಮಯ್ಯ ಹಿಂದುಳಿದವರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಿದ ಧೀಮಂತ ನಾಯಕರು. ಅವರ ಯೋಜನೆಗಳು ಇಂದಿಗೆ ನಮ್ಮ ಮನಸ್ಸಿನಲ್ಲಿ ಇದೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣ ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ ಎಂದು ಜೆಡಿಎಸ್ ಶಾಸಕ ಅನ್ನದಾನಿ ಅವರು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಾಹಳ್ಳಿ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ನದಾನಿ, ವೇದಿಕೆಯ ಮೇಲೆ ಕೂತಿದ್ದ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದರು. ಸಿದ್ದರಾಮಯ್ಯ ಅವರು ನಮ್ಮ ನಾಯಕರು ಎಂದು ಪದೇ ಪದೇ ಭಾಷಣದ ಉದ್ದಕ್ಕೂ ಹೇಳಿದರು. ಅಲ್ಲದೆ ಮಾಜಿ ಸಿಎಂ ನಮ್ಮ ನಾಯಕರು, ನಾನು ಅವರ ಅಭಿಮಾನಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.
ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕಂಡ ಶೇಷ್ಠ ನಾಯಕ, ನಾನು ಅವರ ಅಭಿಮಾನಿ ಆಗಿದ್ದೇನೆ. ನಾನು ಮೊದಲು ಸಿದ್ದರಾಮಯ್ಯ ಅವರ ಗರಡಿಯಲ್ಲಿ ಬೆಳೆದವನು. ಮೊದಲು ಅವರು ಜೆಡಿಎಸ್‍ನಲ್ಲಿ ಇದ್ದಾಗ ನಾನು ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದೆ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು, ಕಾಂಗ್ರೆಸ್ಸಿಗೆ ಹೋದರು. ನಾನು ಕುಮಾರಸ್ವಾಮಿ ಹಾಗೂ ದೇವೇಗೌಡರ ಬಳಿ ಉಳಿದುಕೊಂಡು ಬಿಟ್ಟೆ. ಆದರು ಸಹ ಈಗಲೂ ನಾನು ಸಿದ್ದರಾಮಯ್ಯ ಅವರ ಜೊತೆ ಚೆನ್ನಾಗಿ ಇದ್ದೀನಿ ಎಂದರು.
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಒಂದು ಇತಿಹಾಸ ಇದ್ದ ಹಾಗೆ, ಇಂತಹ ಇತಿಹಾಸ ಇಲ್ಲಿಗೆ ಬಂದಿರೋದು ಒಂದು ಇತಿಹಾಸ ಆಗಲಿದೆ ಎಂದರು.