ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಮೀಸಲಾತಿ ವಿಚಾರವಾಗಿ ಆಡಳಿತ ಪಕ್ಷದ ಶಾಸಕರಿಂದಲೇ ಗಟ್ಟಿ ಧ್ವನಿ ಮೊಳಗಿತು. ಪಂಚಮಸಾಲಿ ಮೀಸಲಾತಿಗಾಗಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಬಾವಿಗಿಳಿದು ಪ್ರತಿಭಟನೆ ನಡೆಸಿದರೆ, ಎಸ್‍ಟಿ ಮೀಸಲಾತಿ ವಿಚಾರವಾಗಿ ಶಾಸಕ ರಾಜೂಗೌಡ ಆಕ್ರೋಶ ಹೊರಹಾಕಿದ್ರು. ಈ ನಡುವೆ ಯಾದವ-ಕಾಡುಗೊಲ್ಲ ಮೀಸಲಾತಿ ವಿಚಾರವಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಧ್ವನಿ ಎತ್ತಿದ್ರು. ಆಡಳಿತ ಪಕ್ಷದ ಶಾಸಕರಿಂದಲೇ ಸರ್ಕಾರಕ್ಕೆ ಸಂಕಟ ಶುರುವಾಗಿದೆ.
ಶೂನ್ಯವೇಳೆಯಲ್ಲಿ ಪಂಚಮಸಾಲಿ ಮೀಸಲಾತಿ ವಿಚಾರ ಪ್ರಸ್ತಾಪಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಹಿಂದೆ ಯಡಿಯೂರಪ್ಪ ಅವರು ಸೆಪ್ಟೆಂಬರ್ ಒಳಗೆ ಮೀಸಲಾತಿ ವಿಚಾರ ಬಗೆಹರಿಸುವುದಾಗಿ ಹೇಳಿದರು. ಈಗಾಗಲೇ ಸೆಪ್ಟೆಂಬರ್ ಡೆಡ್ ಲೈನ್ ಮುಗಿದಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದಿಂದ ಸ್ಪಷ್ಟ ಉತ್ತರ ಕೊಡಬೇಕು. ಎಸ್ ಟಿ ಮೀಸಲಾತಿಯೂ ಇದೆ, ಪಂಚಮಸಾಲಿ ಮೀಸಲಾತಿಯೂ ಇದೆ. ಈ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಆಗ್ರಹಿಸಿದರು.
ಅಲ್ಲದೆ ಸಿಎಂ ಉತ್ತರ ಕೊಡಬೇಕು ಅಂತಾ ಸದನದ ಬಾವಿಗಿಳಿದು ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಧರಣಿ ನಡೆಸಿದರು. ಇದೇ ವೇಳೆ ಎಸ್. ಟಿ.ಮೀಸಲಾತಿ ಬಗ್ಗೆ ಸ್ಪಷ್ಟನೆ ಕೊಡಿ ಅಂತಾ ಕಾಂಗ್ರೆಸ್ ಶಾಸಕ ಕಂಪ್ಲಿ ಗಣೇಶ್ ಧರಣಿ ನಡೆಸಿದರು. ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ, ಸಿಎಂ ಉತ್ತರ ಕೊಡಬೇಕು ಅಂತಿದ್ದಾರೆ. ಸಿ.ಸಿ.ಪಾಟೀಲ್ ಉತ್ತರ ಕೊಡಲು ಸಿದ್ಧರಿದ್ದಾರೆ. ಸಿಎಂ ಉತ್ತರ ಕೊಡಬೇಕು ಅಂದ್ರೆ ಅವರು ಬರುವ ತನಕ ಕಾಯಬೇಕು. ಹೀಗೆ ಧರಣಿ ಮಾಡಿ ಸದನದ ಸಮಯ ವ್ಯರ್ಥ ಮಾಡಬೇಡಿ ಎಂದು ಸಿದ್ದರಾಮಯ್ಯ ಸಲಹೆ ಕೊಟ್ಟರು. ಬಳಿಕ ಸ್ಪೀಕರ್ ಸೂಚನೆ ಮೇರೆಗೆ ಮೂವರು ಶಾಸಕರು ಧರಣಿ ವಾಪಸ್ ಪಡೆದರು.
ಇದೇ ವೇಳೆ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಬಿಜೆಪಿ ಶಾಸಕ ರಾಜೂ ಗೌಡ ಸದನದಲ್ಲಿ ಅಸಮಾಧಾನ ಹೊರಹಾಕಿದರು. ರಮೇಶ್ ಕುಮಾರ್ ಅವರಿಗೆ ಅವಕಾಶ ಕೊಡ್ತೀರಿ, ನಮಗೆ ಮಾತಾಡಲು ಕೊಡಲ್ಲ ಎಂದ ರಾಜೂಗೌಡ ಬೆಂಬಲಕ್ಕೆ ಶಾಸಕ ಅರವಿಂದ ಲಿಂಬಾವಳಿ ನಿಂತರು. ಈ ವೇಳೆ ಸಿಟ್ಟಾದ ಸ್ಪೀಕರ್, ಇದೇನು ಹೀಗೆ ಮಾತಾಡ್ತೀರಿ, ಇದು ಸದನ, ಲಾಂಜ್ ನಲ್ಲಿ ಮಾತಾಡುವ ರೀತಿ ಮಾತನಾಡಬೇಡಿ ಅಂತ ಗರಂ ಆದರು. ಬಳಿಕ ರಾಜೂಗೌಡ ಕ್ಷಮೆ ಕೇಳಿ ನಮ್ಮ ರಕ್ಷಣೆಗೆ ನೀವು ನಿಲ್ಲಬೇಕು ಅಂತಾ ಮನವಿ ಮಾಡಿದರು. ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ ನನ್ನ ಮಕ್ಕಳಿದ್ದಂತೆ, ಅವರಿಗೆ ಅನುಭವ ಇಲ್ಲ: ಕ್ಯಾ.ಅಮರೀಂದರ್ ಸಿಂಗ್
ರಾಮನ ಹೆಸರು ಹೇಳಿ ಅಧಿಕಾರಕ್ಕೆ ಬರೋದು ಗೊತ್ತಿದೆ. ರಾಮನನ್ನ ಬೆಳಕಿಗೆ ತಂದ ವಾಲ್ಮೀಕಿ ಜನಾಂಗದ ಬಗ್ಗೆ ಏಕೆ ಇಷ್ಟು ನಿರ್ಲಕ್ಷ್ಯ. 7.5%ರಷ್ಟು ಮೀಸಲಾತಿ ಕೊಡಬೇಕು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಶಿಫಾರಸಿನಂತೆ ಅನುಷ್ಠಾನ ಮಾಡಬೇಕು ಅಂತಾ ಆಗ್ರಹಿಸಿದ್ರು. ಆಗ ಎಲ್ಲ ಮೀಸಲಾತಿ ವಿಚಾರದ ಬಗ್ಗೆ ನಾಳೆ ಮುಖ್ಯಮಂತ್ರಿ ಉತ್ತರ ಕೊಡ್ತಾರೆ ಎಂದು ಸ್ಪೀಕರ್ ಸಮಾಧಾನಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!
ಇದೆಲ್ಲದೆ ನಡುವೆ ಆಡಳಿತ ಪಕ್ಷದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾಡುಗೊಲ್ಲ ಮೀಸಲಾತಿ ಸಂಬಂಧ ಚರ್ಚೆಗೆ ನಮಗೂ ಅವಕಾಶ ಕೊಡಿ ಅಂತಾ ಆಗ್ರಹಿಸಿದರು. ನಿಯಮ 69ರಡಿ ಚರ್ಚೆಗೆ ಹಾಕಿದ್ದೀರಿ, ಆಗ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ರು. ಒಟ್ಟಾರೆ ಮೀಸಲಾತಿ ಸಂಬಂಧ ಆಡಳಿತ ಪಕ್ಷದ ಶಾಸಕರೇ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಕೊಡುವ ಉತ್ತರ ಕುತೂಹಲ ಮೂಡಿಸಿದೆ.