– ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು ಮಸಿ ಬಳಿದು, ತಲೆ ಬೋಳಿಸಿ ಮೆರವಣಿಗೆ
– ಏಕಾಂತದಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದ್ದ ಜೋಡಿ
ಲಕ್ನೋ: ವಿಧವೆ(37) ಹಾಗೂ ಅಂಗವಿಕಲ(40) ಅಕ್ರಮ ಸಂಬಂಧ ಹೊಂದಿದ್ದಕ್ಕೆ ಇಬ್ಬರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ, ಮುಖಕ್ಕೆ ಮಸಿ ಬಳಿದು, ಥಳಿಸಿ ಊರು ತುಂಬಾ ಮೆರವಣಿಗೆ ಮಾಡಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕಣ್ಣೌಜ್‍ನಲ್ಲಿ ಘಟನೆ ನಡೆದಿದ್ದು, ಐದು ಮಕ್ಕಳ ತಾಯಿ ಹಾಗೂ ಅಂಗವಿಕಲ ವ್ಯಕ್ತಿ ಇಬ್ಬರೂ ಏಕಾಂತದಲ್ಲಿದ್ದಾಗ ಮಹಿಳೆಯ ಚಿಕ್ಕಪ್ಪ ಹಾಗೂ ಆತನ ಮಕ್ಕಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವೇಳೆ ಇಬ್ಬರನ್ನೂ ಲಾಕ್ ಮಾಡಲಾಗಿದೆ. ನಂತರ ಮನಬಂದಂತೆ ಥಳಿಸಿ, ತಲೆ ಬೋಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಮುಖಕ್ಕೆ ಕಪ್ಪು ಮಸಿ ಬಳಿದು ಊರ ತುಂಬ ಮೆರವಣಿಗೆ ಮಾಡಲಾಗಿದೆ.
ಅವರನ್ನು ರೂಮ್‍ನಲ್ಲಿ ಕೂಡಿ ಹಾಕಿ ಥಳಿಸಲಾಯಿತು. ನಂತರ ಇಬ್ಬರ ತಲೆ ಬೋಳಿಸಿ, ಕೊರಳಿಗೆ ಶೂ, ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು ಬಣ್ಣ ಬಳಿದು ನಂತರ ಊರಲ್ಲಿ ಮೆರವಣಿಗೆ ಮಾಡಲಾಯಿತು ಎಂದು ಸ್ಥಳೀಯರು ವಿವರಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಿಯರು ಊರ ಮುಖಂಡರಿಗೆ ವಿಷ ತಿಳಿಸಿದ್ದು, ನಂತರ ಇಬ್ಬರನ್ನೂ ರಕ್ಷಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಟ್ಟ ಮಕ್ಕಳು ಅಮ್ಮನಿಗಾಗಿ ಕೂಗುತ್ತಿದ್ದರೂ ಯಾವುದನ್ನೂ ಲೆಕ್ಕಿಸದೆ ರಾಕ್ಷರ ರೀತಿ ಅವರನ್ನು ಮೆರವಣಿಗೆ ಮಾಡಲಾಗಿದೆ.
ಈ ಕುರಿತು ಎಎಸ್‍ಪಿ ವಿನೋದ್ ಕುಮಾರ್ ಮಾಹಿತಿ ನೀಡಿ, ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರು ಮಾಹಿತಿ ಪಡೆದಿದ್ದಾರೆ. ನಂತರ ಮಹಿಳೆಯ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.