ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್

Public TV
2 Min Read
sureshkumar 1

– ಎಲ್ಲ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ಪ್ರತಿಪಾದನೆ

ಬೆಂಗಳೂರು: ಪದವಿಪೂರ್ವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉಚಿತ ಎಂದು ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

2nd puc exam 1

ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ವೃತ್ತಿಪರ ಶಿಕ್ಷಣಕ್ಕೆ ಸನ್ನದ್ಧರಾಗುವ ಹಂತದಲ್ಲಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯಾವುದಾದರೂ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ. ಕೋವಿಡ್ ಸಂಪೂರ್ಣವಾಗಿ ತಹಬಂದಿಗೆ ಬಂದ ನಂತರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿಯಾದರೂ ಪರೀಕ್ಷೆಗಳನ್ನು ನಡೆಸುವುದು ಸಮರ್ಪಕವಾಗುತ್ತದೆ ಎಂದು ಪ್ರತಿಪಾದಿಸಿದರು.

ಪ್ರಸ್ತುತ ಕೋವಿಡ್ ಪ್ರಸರಣವು ಎಲ್ಲೆಡೆ ತೀವ್ರವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಎರಡನೇ ಅಲೆ ತಹಬಂದಿಗೆ ಬಂದ ಕೂಡಲೇ 15-20 ದಿನಗಳ ಕಾಲಾವಕಾಶ ನೀಡಿ ಮುಂಚೆಯೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲು ಸದ್ಯಕ್ಕೆ ತೀರ್ಮಾನಿಸಲಾಗಿದೆ. ಕೋವಿಡ್ ಕಾರಣಕ್ಕಾಗಿ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿಫಲರಾಗುವ ವಿದ್ಯಾರ್ಥಿಗಳಿಗೆ ಹೊಸದಾಗಿ ಇನ್ನೊಮ್ಮೆ ಪರೀಕ್ಷೆ ಬರೆಯಲು ಇದೇ ಸಾಲಿನಲ್ಲಿ ಅವಕಾಶ ಕಲ್ಪಿಸಲು ಸಹ ಕರ್ನಾಟಕ ಸರ್ಕಾರವು ಯೋಜಿಸಿದೆ ಎಂದರು.

suresh kumar 2

ಪರೀಕ್ಷಾ ಪ್ರಕ್ರಿಯೆ ಸರಳೀಕರಣಗೊಳ್ಳಬೇಕೆಂದು ಹಲವರ ಪ್ರತಿಪಾದನೆಯಾಗಿದೆ. ಸರಳೀಕೃತ ಮಾದರಿಯಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನಗಳ ಕಾಲಾವಕಾಶ ಅಗತ್ಯವಿದೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯೂ ಕಡಿಮೆ ಅವಧಿಯ ಪರೀಕ್ಷೆಗಳನ್ನು ನಡೆಸುವ ಯೋಜನೆಯನ್ನು ಸಲಹಾತ್ಮಕವಾಗಿ ಹೇಳಿದೆ. ಕರ್ನಾಟಕ ರಾಜ್ಯವು ಕಳೆದ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಿದ ಅನುಭವ ಹೊಂದಿದ್ದು, ಈ ಅನುಭವದ ಹಿನ್ನೆಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗಳನ್ನು ಸಮರ್ಥವಾಗಿ ಆಯೋಜಿಸುವುದು ಹೆಚ್ಚಿನ ಸಮಸ್ಯೆಯಾಗದಿದ್ದರೂ, ವಿದ್ಯಾರ್ಥಿಗಳ ಕಲಿಕೆ, ಪೋಷಕರ ಮನ:ಸ್ಥಿತಿ, ಕೇಂದ್ರ ಸರ್ಕಾರದ ಸಲಹೆಗಳು ಹಾಗೂ ಪ್ರಸ್ತುತ ಪೂರ್ವಸಿದ್ಧತಾ ಕಾರ್ಯಗಳನ್ನು ಸಮಗ್ರವಾಗಿ ಅವಲೋಕಿಸಿ, ಒಟ್ಟಾರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ದ್ವಿತೀಯ ಪಿಯು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಜುಲೈ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾದಲ್ಲಿ ಆಗಸ್ಟ್ ತಿಂಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ನೀಟ್/ಜೆಇಇ/ಸಿಇಟಿ/ಐಸಿಎಆರ್/ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್ ತಿಂಗಳ ಸೂಕ್ತ ದಿನಾಂಕಗಳಂದು ಆಯೋಜಿಸಬಹುದಾಗಿದೆಯೆಂದೂ ಸುರೇಶ್ ಕುಮಾರ್ ಸಲಹೆ ನೀಡಿದರು.

MODI 3

ಕೇಂದ್ರ ಸರ್ಕಾರದ ಈ ರೀತಿಯ ಸಮಾಲೋಚನಾ ಸಭೆಯು ಅಭಿನಂದನಾರ್ಹ ಪ್ರಯತ್ನ. ಇಂತಹ ಪ್ರಯತ್ನಗಳು ಸಂಕಷ್ಟದ ಸಂದರ್ಭದಲ್ಲಿ ಇಡೀ ನಾಗರಿಕ ಸಮಾಜಕ್ಕೆ ವಿಶ್ವಾಸವನ್ನು ಮೂಡಿಸುವಂತಹದ್ದಾಗಿವೆ ಎಂದರು. ಸಭೆಯಲ್ಲಿ ವಿವಿಧ ರಾಜ್ಯಗಳ ಶಿಕ್ಷಣ ಸಚಿವರು ತಮ್ಮ ರಾಜ್ಯಗಳ ಸ್ಥಿತಿಗತಿಗಳನ್ನು ಗಮನಕ್ಕೆ ತಂದರು ಹಾಗೂ ಸಿ.ಬಿ.ಎಸ್.ಇ. ಮಂಡಳಿಯು ಸೇರಿದಂತೆ ಬಹುತೇಕ ರಾಜ್ಯಗಳು ಪರೀಕ್ಷೆ ನಡೆಸುವ ಪರವಾಗಿ ವಿಚಾರ ಮಂಡಿಸಿದರು. ಬಹುಪಾಲು ಸಚಿವರು ಪರೀಕ್ಷೆಗಳನ್ನು ನಡೆಸಲೇಬೇಕೆಂದು ಪ್ರತಿಪಾದಿಸಿದರು. ಸಭೆಯಲ್ಲಿ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಜವಳಿ ಸಚಿವೆ ಸ್ಮೃತಿ ಇರಾನಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸೇರಿದಂತೆ ಹಲವು ರಾಜ್ಯಗಳ ಶಿಕ್ಷಣ ಸಚಿವರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *