– 2021ರ ಜುಲೈ ವೇಳೆಗೆ 30 ಕೋಟಿ ಡೋಸ್ ಲಸಿಕೆ ಉತ್ಪಾದನೆ
– 2 ರಾಜ್ಯದಲ್ಲಿ ಪರೀಕ್ಷಾರ್ಥ ಲಸಿಕೆ ವಿತರಣೆ
ನವದೆಹಲಿ: ದೇಶಾದ್ಯಂತ ಕೊರೊನಾ ಲಸಿಕೆ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದು, ಹೊಸ ವರ್ಷಕ್ಕೆ ಲಸಿಕೆ ವಿತರಣೆ ಶುರುವಾಗಬಹುದು ಎಂಬ ಮಾಹಿತಿ ಸಹ ಲಭ್ಯವಾಗಿದೆ. ಇದೇ ವೇಳೆ ವ್ಯಾಕ್ಸಿನ್ ತಯಾರಿಕಾ ಕಂಪನಿ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‍ಐಐ) ಸಿಇಒ ಆಧಾರ್ ಪೂನಾವಾಲಾ ಮಾತನಾಡಿದ್ದು, ಬಿಡುಗಡೆಯಾದ ಆರೇ ತಿಂಗಳಲ್ಲಿ ಲಸಿಕೆ ಕೊರತೆ ಉಂಟಾಗಬಹುದು ಎಂದು ಹೇಳಿದ್ದಾರೆ
ಆಕ್ಸ್ ಫರ್ಡ್-ಅಸ್ಟ್ರಾಜೆನೆಕಾ ತಯಾರಿಸುವ ಕೊರೊನಾ ವೈರಸ್ ಲಸಿಕೆ ಕೋವಿಶೀಲ್ಡ್ ದೇಶದಲ್ಲಿ ಬಹುಶಃ 5 ಕೋಟಿ ಡೋಸ್‍ಗೂ ಅಧಿಕ ಮೊದಲು ಭಾರತಕ್ಕೆ ಮೀಸಲಿರಿಸಲಿದೆ. ಭಾರತ ಹೆಚ್ಚು ಜನಸಂಖ್ಯೆ ಹೊಂದಿದ್ದು, ಬಹುಶಃ 5 ಕೋಟಿ ಡೋಸ್‍ಗೂ ಅಧಿಕ ವ್ಯಾಕ್ಸಿನ್ ಭಾರತಕ್ಕೆ ಮೀಸಲಿರಿಸುತ್ತೇವೆ ಎಂದು ಆಧಾರ್ ಪೂನಾವಾಲಾ ಮಾಹಿತಿ ನೀಡಿದ್ದಾರೆ.
2021ರ ಜುಲೈ ವೇಳೆಗೆ ಒಟ್ಟು 30 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಗುರಿ ಹೊಂದಲಾಗಿದೆ. ಆದರೂ 2021ರ ಮೊದಲ ಆರು ತಿಂಗಳಲ್ಲಿ ಕೋವಿಶೀಲ್ಡ್ ಕೊರೊನಾ ಲಸಿಕೆ ಕೊರತೆ ಉಂಟಾಗಲಿದೆ. ಇದಕ್ಕೆ ಯಾರೂ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ 2021ರ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಇತರೆ ಲಸಿಕೆ ಉತ್ಪಾದಕರು ಸಹ ಪೂರೈಕೆಗೆ ಕೈ ಜೋಡಿಸುತ್ತಾರಾ ನೋಡಬೇಕಿದೆ ಎಂದು ಅವರು ತಿಳಿಸಿದರು.
ಕೊರೊನಾ ಲಸಿಕೆಯ ದೀರ್ಘಕಾಲಿನ ಪೂರೈಕೆ ಬಗ್ಗೆ ಮಾತನಾಡಿದ ಪೂನವಾಲಾ, ಬಡ ರಾಷ್ಟ್ರಗಳಿಗೆ ಲಸಿಕೆ ವಿತರಣೆ ಮಾಡುವ ಸಂಬಂಧ ಅಭಿವೃದ್ಧಿ ಹೊಂದಿರುವ ದೇಶಗಳು ಮತ್ತು ಲಸಿಕೆ ಉತ್ಪದನಾ ಕಂಪನಿಗಳು ಮಾಡಿಕೊಂಡಿರುವ ಕೊವಾಕ್ಸ್ ಫೆಸಿಲಿಟಿಯಲ್ಲಿ ಭಾರತವೂ ಸೇರಿದೆ. ಹೀಗಾಗಿ ಭಾರತದ ಜೊತೆ ನಾವು ಕೊವಾಕ್ಸ್‍ಗೂ ಲಸಿಕೆ ನೀಡಬೇಕಾಗುತ್ತದೆ. ಕಂಪನಿ ಈಗಾಗಲೇ 4-5 ಕೋಟಿ ಡೋಸ್ ಲಸಿಕೆ ತಯಾರಿಸಿದ್ದು, ಮಾರ್ಚ್ ವೇಳೆಗೆ ಹೊಸ ಸೌಲಭ್ಯಗಳು ಬಂದರೆ ಪ್ರತಿ ತಿಂಗಳು 100 ಮಿಲಿಯನ್‍ಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದರು.
ನಮ್ಮಲ್ಲಿ 4-5 ಕೋಟಿ ಡೋಸ್ ಕೋವಿಶೀಲ್ಡ್ ಸಂಗ್ರಹವಾಗಿದೆ. ಕೆಲವೇ ದಿನಗಳಲ್ಲಿ ನಿಯಂತ್ರಕರಿಂದ ಅನುಮೋದನೆ ಪಡೆದ ಬಳಿಕ ಸರ್ಕಾರಕ್ಕೆ ಹಸ್ತಾಂತರಿಸುತ್ತೇವೆ. ಅವರು ಎಷ್ಟು ತೆಗೆದುಕೊಳ್ಳಬಹುದು, ಎಷ್ಟು ವೇಗವಾಗಿ ತೆಗೆದುಕೊಳ್ಳಬಹುದು ಎಂಬುದನ್ನು ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಭಾರತಕ್ಕೆ ಜನವರಿಯಿಂದ ಮುಂದಿನ ಆರರಿಂದ ಎಂಟು ತಿಂಗಳವರೆಗೆ 60 ಕೋಟಿ ಲಸಿಕೆಯ ಅಗತ್ಯವಿದೆ. ಭಾರತ ಸರ್ಕಾರ ಲಸಿಕೆ ಸಂಬಂಧ ಫೈಝರ್ ಮತ್ತು ಭಾರತ್ ಬಯೋಟೆಕ್ ಕಂಪನಿಯ ಜೊತೆ ಮಾತುಕತೆ ನಡೆಸಿದೆ. ಫೈಝರ್, ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಲ್ ಕಂಪನಿಯ ಕೊವಾಕ್ಸಿನ್ ಪೈಕಿ ಒಂದು ಲಸಿಕೆಗೆ ಶೀಘ್ರವೇ ಅನುಮತಿ ಸಿಗುವ ಸಾಧ್ಯತೆಯಿದೆ.
ಈ ಮಧ್ಯೆ ರಾಷ್ಟ್ರವ್ಯಾಪಿ ಕೊರೊನಾ ಲಸಿಕೆ ವಿತರಿಸುವ ಸಂಬಂಧ ಆರೋಗ್ಯ ಅಧಿಕಾರಿಗಳು ಪರೀಕ್ಷಾರ್ಥವಾಗಿ ಕೆಲ ರಾಜ್ಯಗಳಲ್ಲಿ ಲಸಿಕೆ ವಿತರಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಗುಜರಾತ್‍ನ ರಾಜ್‍ಕೋಟ್ ಜಿಲ್ಲೆ, ರಾಜ್‍ಕೋಟ್ ನಗರ, ಗಾಂಧಿನಗರ ಜಿಲ್ಲೆ ಹಾಗೂ ಗಾಂಧಿ ನಗರಗಳಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗಿದೆ. ಆಂಧ್ರ ಪ್ರದೇಶದಲ್ಲಿ ಕೃಷ್ಣ ಜಿಲ್ಲೆಯ ಐದು ಸ್ಥಳಗಳಲ್ಲಿ ಪ್ರಯೋಗ ನಡೆಸಲಾಗಿದೆ ಎಂದು ವರದಿಯಾಗಿದೆ.