ಚಿಕ್ಕಮಗಳೂರು: ಯೂ ಟ್ಯೂಬ್ ವಿಡಿಯೋ ನೋಡಿ ದರೋಡೆ ಮಾಡಲು ಯತ್ನಿಸಿದ್ದ ಇಬ್ಬರು ಯುವಕರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಎಸ್ಪಿ ಅಕ್ಷಯ್, ಬಂಧಿತ ದರೋಡೆಕೋರರಿಬ್ಬರು 25ರ ಆಸುಪಾಸಿನ ಯುವಕರಾಗಿದ್ದು, ಇದೇ ಮೊದಲ ಬಾರಿಗೆ ದರೋಡೆ ಮಾಡಲು ಯತ್ನಿಸಿದ್ದಾರೆ. ದರೋಡೆ ನಡೆಸಲು ಸುಮಾರು 8 ದಿನಗಳಿಂದ ಆರೋಪಿಗಳು ಯೂ ಟ್ಯೂಬ್ ವೀಡಿಯೋ ನೋಡಿ ಪ್ಲಾನ್ ಮಾಡಿದ್ದರು. ಅದರಂತೆ ಆರೋಪಿಗಳು ಬ್ಲಾಕ್ ಪ್ಯಾಂಟ್-ಶರ್ಟ್, ಜಾಕೇಟ್, ಶೂ, ಹೆಲ್ಮೆಟ್, ಹ್ಯಾಂಡ್ ಗ್ಲೌಸ್ ಎಲ್ಲವನ್ನೂ ಖರೀದಿಸಿ, ಬೈಕಿನ ನಂಬರ್ ಪ್ಲೇಟ್ ತೆಗೆದು ಬೈಕಿನ ಮಾಡೆಲ್ ಕೂಡ ತಿಳಿಯದಂತೆ ಬೈಕಿಗೆ ಪ್ಲಾಸ್ಟರ್ ಹಾಕಿ ಪಲ್ಸರ್ ಬೈಕನ್ನ ಯಾವ ಬೈಕ್ ಎಂದೇ ಗೊತ್ತಾಗದಂತೆ ಬದಲಿಸಿದ್ದಾರೆ ಎಂದು ಹೇಳಿದರು.
ಇದೇ ಮೊದಲ ದರೋಡೆ ಪ್ರಯತ್ನವಾದರೂ ಪ್ರೊಫೇಷನಲ್ ದರೋಡೆಕೋರರಂತೆ ಖಾರದ ಪುಡಿ, ಲಾಂಗು, ಮಚ್ಚು, ಕ್ಲೋರೋಫಾರಂ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನ ಕೊಂಡೊಯ್ದಿದ್ದರು. ಆದರೆ ಅಗ್ನಿಶಾಮಕ ವಾಹನದ ಚಾಲಕ ದೇವೇಂದ್ರಪ್ಪ ಎಂಬವರು ಸಮಯ ಪ್ರಜ್ಞೆಯಿಂದ ದರೋಡೆಕೋರರ ಬೈಕಿಗೆ ಅಡ್ಡ ಹಾಕಿ ಗಾಡಿಯನ್ನು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಆರೋಪಿಗಳನ್ನು ಸೆರೆಹಿಡಿಯಲು ಸಹಾಯ ಮಾಡಿದ ಅಗ್ನಿಶಾಮಕ ಸಿಬ್ಬಂದಿ ದೇವೇಂದ್ರಪ್ಪ ಹಾಗೂ ಪೊಲೀಸರಿಗೆ ಎಸ್ಪಿ ಅಕ್ಷಯ್ ಅವರು ನಗದು ಬಹುಮಾನ ನೀಡಿ ಪುರಸ್ಕರಿಸಿದ್ದಾರೆ.