ಹಾವೇರಿ: ಗರ್ಭಿಣಿಗೆ ಏಕಾಏಕಿ ಹೆರಿಗೆ ನೋವು ಕಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆ ಪಡೆದು ಮಹಿಳೆಯರು ಹೆರಿಗೆ ಮಾಡಿಸಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ.
ಹಾನಗಲ್ ಪಟ್ಟಣದ ನಿವಾಸಿಯಾಗಿರುವ ವಾಸವಿ ಪತ್ತೇಪೂರ ಅವರಿಗೆ ಭಾನುವಾರ ಮಧ್ಯಾಹ್ನ ಎರಡೂವರೆ ಗಂಟೆ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಈ ವೇಳೆ ವಾಸವಿ ಪತ್ತೇಪೂರ ಅವರಿಗೆ ಹೆರಿಗೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಮಹಿಳೆಯರು ನೆರವಿಗೆ ಆಗಮಿಸಿದ್ದರು.
Advertisement
Advertisement
ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ಕಾರಣ ಮಹಿಳೆಯರು ತಮಗೆ ಪರಿಚಯವಿದ್ದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ.ಪ್ರಿಯಾಂಕಾ ಮಂತಗಿ ಅವರಿಗೆ ವಿಡಿಯೋ ಕಾಲ್ ಮಾಡಿ ಸಲಹೆ, ಸೂಚನೆ ಪಡೆದುಕೊಂಡಿದ್ದಾರೆ. ವೈದ್ಯರಿಂದ ಸಲಹೆ ಪಡೆದ ಮಹಿಳಾ ತಂಡ ಸುರಕ್ಷಿತವಾಗಿ ಹೆರಿಗೆ ಮಾಡಿಸಲು ಯಶಸ್ವಿಯಾಗಿತ್ತು.
Advertisement
Advertisement
ವಾಸವಿ ಪತ್ತೇಪೂರ ಅವರಿಗೆ ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಹೆರಿಗೆ ಬಳಿಕ ತಾಯಿ ಮತ್ತು ಮಗು ಇಬ್ಬರನ್ನು ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದ ಮಧುಲಿಕಾ ದೇಸಾಯಿ, ಅಂಕಿತಾ, ಜ್ಯೋತಿ, ವಿಜಯಲಕ್ಷ್ಮಿ, ಮಾಧುರಿ, ಮುಕ್ತಾ ಹಾಗೂ ಶಿವಲೀಲಾ ಪತ್ತಾರ ಅವರ ತಂಡದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.