ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ನೆರವೇರಿಸಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲಹೆಗೆ ವಿಶ್ವ ಹಿಂದೂ ಪರಿಷತ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಶಿವ ಸೇನೆ ಸುಖಾಸುಮ್ಮನೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಿರುಗೇಟು ನೀಡಿದೆ.
ವಿಶ್ವ ಹಿಂದೂ ಪರಿಷತ್‍ನ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಉದ್ಧವ್ ಠಾಕ್ರೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭೂಮಿ ಪೂಜೆ ಮಾಡುವಂತೆ ಸಲಹೆ ನೀಡಿದ್ದಾರೆ. ಇದು ಅವರ ವಿತಂಡ ವಾದವನ್ನು ತೋರಿಸುತ್ತದೆ. ಬಾಳಾ ಸಾಹೇಬ್ ಠಾಕ್ರೆಯವರ ಪಕ್ಷದವರು ಈ ರೀತಿಯಾಗಿ ಹೇಳಿಕೆ ನೀಡಿದ್ದಕ್ಕೆ ನಾವು ಬೇಸರ ವ್ಯಕ್ತಪಡಿಸುತ್ತೇವೆ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ಭೂಮಿ ಪೂಜೆ ಅದೊಂದು ಶುಭ ಆಚರಣೆಯಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಡಲು ಸಾಧ್ಯವಿಲ್ಲ. ಯಾವುದೇ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಬೇಕಾದಲ್ಲಿ ಮಾತೃಭೂಮಿಗೆ ಪೂಜೆ ಸಲ್ಲಿಸಬೇಕು. ಭೂಮಿ ಅಗಿಯಲು ಹಾಗೂ ಕಟ್ಟಡ ನಿರ್ಮಾಣ ಮಾಡಲು ಅವಳ ಅನುಮತಿ ಪಡೆಯಬೇಕು. ಈ ಮೂಲಕ ನಮ್ಮ ಮುಂದಿನ ಯೋಜನೆಗೆ ಅವಳ ಆಶೀರ್ವಾದ ಪಡೆಯಬೇಕಿದೆ ಎಂದು ತಿಳಿಸಿದರು.
Advertisement
ಕೊರೊನಾ ವೈರಸ್ ಹಿನ್ನೆಲೆ ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಬೇಕು ಎಂದು ಉದ್ಧವ್ ಠಾಕ್ರೆ ಸಾಮ್ನಾ ಪತ್ರಿಕೆಯಲ್ಲಿನ ಸಂದರ್ಶನದಲ್ಲಿ ಹೇಳಿದ್ದರು.
Advertisement
ಈ ಕುರಿತು ವಿಶ್ವ ಹಿಂದೂ ಪರಿಷತ್ ನಾಯಕರು ಪ್ರತಿಕ್ರಿಯಿಸಿ, ಕೊರೊನಾ ವೈರಸ್ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಅಲ್ಲದೆ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಕೇವಲ 200 ಜನ ಭಾಗವಹಿಸುತ್ತಾರೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಈಗಗಲೇ ವಿಶ್ವ ಹಿಂದೂ ಪರಿಷತ್ ಹೇಳಿದೆ ಎಂದು ಉದ್ಧವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದೆ.
ಇತ್ತೀಚೆಗೆ ಸಾಮ್ನಾದಲ್ಲಿ ಬಿತ್ತರವಾದ ಉದ್ಧವ್ ಠಾಕ್ರೆ ಅವರ ಸಂದರ್ಶನದಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದ್ದು, ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಬಹುದು. ಇದು ಸಂತಸದ ಕ್ಷಣವಾಗಿದೆ. ಹೀಗಾಗಿ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ನಾವು ಕೊರೊನಾ ಸೋಂಕು ಹೆಚ್ಚು ಹರಡಲು ಅವಕಾಶ ಮಾಡಿಕೊಡಬೇಕೆ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.
ಇದು ಸಾಮಾನ್ಯ ಮಂದಿರ ನಿರ್ಮಾಣದ ವಿಚಾರವಲ್ಲ, ಕೊರೊನಾ ಮಹಾಮಾರಿ ವಿರುದ್ಧ ಇಂದು ನಾವು ಹೋರಾಡುತ್ತಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಹ ನಿಷೇಧ ಹೇರಲಾಗಿದೆ. ಭೂಮಿ ಪೂಜೆ ಕಾರ್ಯಕ್ರಮಕ್ಕೆ ನಾನು ಅಯೋಧ್ಯೆಗೆ ಹೋಗಬಲ್ಲೆ. ಆದರೆ ಲಕ್ಷಾಂತರ ರಾಮನ ಭಕ್ತರ ಕಥೆ ಏನು, ಅವರನ್ನು ನೀವು ತಡೆಯಲು ಸಾಧ್ಯವೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿಯೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಮಾಡಿ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಸದಸ್ಯರ ಮಾಹಿತಿಯಂತೆ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಬಹುದು ಎಂದು ಹೇಳಲಾಗಿದೆ.