ಹಾಸನ: ಯಡಿಯೂರಪ್ಪ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಮುಂದಿನ ಚುನಾವಣೆ ಕೂಡ ಅವರ ನೇತೃತ್ವದಲ್ಲಿ ನಡೆಯುತ್ತೆ ಎಂದು ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಭವಿಷ್ಯ ನುಡಿದಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಹುಟ್ಟುಹಬ್ಬದ ಪ್ರಯುಕ್ತ ಹಿಮ್ಸ್ ಆವರಣದಲ್ಲಿ ಕೊರೊನಾ ವಾರಿಯರ್ಸ್‍ಗೆ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಚರ್ಚೆಯಿಂದ ಯಾರಿಗೆ ಖುಷಿಯಾಗುತ್ತೋ ಅವರೇ ಇದನ್ನೆಲ್ಲ ಹುಟ್ಟುಹಾಕಿದ್ದಾರೆ. ಮಾಧ್ಯಮದ ಸ್ನೇಹಿತರು ಇದನ್ನು ಆರೋಗ್ಯಕರವಾಗಿ ಚರ್ಚೆ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಇಂತಹ ಚರ್ಚೆಗೆ ಪ್ರೋತ್ಸಾಹ ಕೊಡಲು ಒಬ್ಬರೂ ಶಾಸಕರಿರುವುದಿಲ್ಲ. ಎಲ್ಲಾ ಶಾಸಕರು ಸಿಎಂ ಅವರ ಹಿಂದೆ ಇದ್ದೇವೆ. ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೇಂದ್ರದಿಂದ ಹಣ ತರುವ ಯೋಜನೆಯೊಂದಿಗೆ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ ಅಷ್ಟೇ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರಿಗೆ ಬಿಟ್ಟ ವಿಚಾರ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಂಪುಟ ಪುನರ್ ರಚನೆಯಾದ್ರೆ ಮೂವರು ಸಚಿವರಿಗೆ ಕೊಕ್ – 7 ಶಾಸಕರಿಗೆ ಸಚಿವ ಸ್ಥಾನ?
ಇದೇ ವೇಳೆ ವಿಜಯೇಂದ್ರ ಸೂಪರ್ ಸಿಎಂ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಪ್ರಭಾವ ಹೆಚ್ಚಾಗುತ್ತಿದ್ದು, ರಾಜ್ಯದ ನಾಯಕತ್ವ ವಹಿಸಿಕೊಳ್ಳಲು ಮುಂದಾಳತ್ವದಲ್ಲಿ ಬರುತ್ತಿದ್ದಾರೆ. ಅವರು ಬೆಳೆಯುತ್ತಿದ್ದಾರೆ ಎಂದು ಹೀಗೆ ವಿರೋಧ ಪಕ್ಷದವರು ಹೀಗೆ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಆಗುವ ಎಲ್ಲ ಅರ್ಹತೆ ಮತ್ತು ಯೋಗ್ಯತೆಯನ್ನು ಅವರು ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರು ಸೂಪರ್ ಸಿಎಂ ಅಲ್ಲ ಮುಂದೊಂದು ದಿನ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರು.