ವಿಜಯೇಂದ್ರರನ್ನ ದುಡ್ಡು ಹಂಚಲು ಚುನಾವಣೆಗೆ ಬಿಟ್ಟಿದ್ದಾರೆ: ಯತ್ನಾಳ್

Public TV
2 Min Read
hvr basangouda patil yathnal

– ವಿಜಯೇಂದ್ರ ಬಳಿ ನಾಯಕತ್ವ ಗುಣ ಇಲ್ಲ

ಹಾವೇರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವ್ಯಾಮೋಹದಿಂದ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಮಗನನ್ನು ಉಪಚುನಾವಣೆಗೆ ಬಿಟ್ಟಿದ್ದಾರೆ. ವಿಜಯೇಂದ್ರ ಬಳಿ ದುಡ್ಡಿದೆ. ಅದನ್ನು ಹಂಚಲು ಅಲ್ಲಿ ಬಿಟ್ಟಿದ್ದಾರೆ. ವಿಜಯೇಂದ್ರ ಬಳಿ ನಾಯಕತ್ವ ಗುಣವಿಲ್ಲ ಎಂದು ಸ್ವಪಕ್ಷದ ವಿರುದ್ಧವೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

VIJAYENDRA

ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಬಳಿ ಸಾವಿರಾರು ಕೋಟಿ ರೂ. ಇದೆ. ಕರ್ನಾಟಕದ ಸಾವಿರಾರು ಕೋಟಿ ರೂ.ಗಳನ್ನು ಅವರು ಲೂಟಿ ಮಾಡಿದ್ದಾರೆ. ಸದ್ಯದಲ್ಲೇ ಫೆಡರಲ್ ಬ್ಯಾಂಕ್ ಹಗರಣ ಹೊರಗೆ ಬರುತ್ತದೆ. ವಿಜಯೇಂದ್ರ ವಿದೇಶದಲ್ಲಿ ಸಾವಿರಾರು ಕೋಟಿ ರೂ. ಇಟ್ಟಿದ್ದಾರೆ. ಯಡಿಯೂರಪ್ಪನವರು ಬಿಜೆಪಿ ಕಟ್ಟುವಾಗ ಹಣ ಹಂಚುವ ಪರಿಸ್ಥಿತಿ ಇರಲಿಲ್ಲ. ನಾವೆಲ್ಲ ಅತೀ ಕಡಿಮೆ ಹಣದಲ್ಲಿ ಎಂಎಲ್‍ಎ, ಎಂಪಿ ಆಗಿದ್ದೇವೆ. ಈಗ ಯಡಿಯೂರಪ್ಪನವರ ಕಾಲದಲ್ಲಿ ಹಣ ಹಂಚುವ ಪರಿಸ್ಥಿತಿ ಬಂದಿದೆ. ಈಗ ಎಂಪಿ ಆಗಬೇಕಾದರೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಬಂದಿದೆ ಎಂದರು.

ಮೇ ಎರಡರ ಒಳಗೆ ಸಿಎಂ ಬದಲಾವಣೆ ಆಗುತ್ತೆ. ಯತ್ನಾಳ್ ಸಿಎಂ ಆಗುತ್ತಾರೋ ಅಥವಾ ಬೇರೆಯವರು ಆಗುತ್ತಾರೋ ಗೊತ್ತಿಲ್ಲ. ಅದರೆ ಬದಲಾವಣೆಯಂತೂ ಖಚಿತ. ಮೇ ಎರಡರ ಮೇಲಂತೂ ಹೋಗುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

BSY 2

ಸಾರಿಗೆ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷರು ಹದ್ದು ಮೀರಿ ಮಾತನಾಡುತ್ತಿದ್ದಾರೆ. ಅದು ಅವರಿಗೆ ಸಂಬಂಧವೇ ಇಲ್ಲ. ಹೊರಗಿನರವನ್ನು ತಂದು ಅಧ್ಯಕ್ಷರನ್ನ ಮಾಡಿಕೊಳ್ಳಬೇಡಿ. ಕೆಲವರು ದೇಶ ಹಾಳು ಮಾಡುವವರು ಸೇರಿಬಿಟ್ಟಿದ್ದಾರೆ. ಇದರಿಂದ ಜನರಿಗೆ ಎಷ್ಟು ತೊಂದರೆ ಆಗುತ್ತಿದೆ. ಸಾರಿಗೆ ನೌಕರರದ್ದು ಒಂದು ಸಂಸ್ಥೆ, ಎಲ್ಲರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎನ್ನುತ್ತಾರೆ. ಮುಂದೆ ಎಲ್ಲರಿಗೂ ಐಎಎಸ್, ಐಪಿಎಸ್ ರೀತಿ ಸಂಬಳ ನೀಡಿ ಎನ್ನುತ್ತಾರೆ. ಅದೆಲ್ಲ ಆಗುವುದಿಲ್ಲ, ನಾನೇ ಮುಖ್ಯಮಂತ್ರಿ ಆದರೂ ಆಗುವುದಿಲ್ಲ. ಸಾರಿಗೆ ಸಂಸ್ಥೆ ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿದೆ. ಹೀಗಿರುವಾಗ ಎಲ್ಲಿಂದ ಸಂಬಳ ಹೆಚ್ಚು ಮಾಡುತ್ತಾರೆ, ಬೋನಸ್ ಕೊಡ್ತಾರೆ ಎಂದು ಪ್ರಶ್ನಿಸಿದರು.

ಕೋಡಿಹಳ್ಳಿ ಚಂದ್ರಶೇಖರ್ ಅಂಥವರು ಕಾರ್ಮಿಕರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ನಮ್ಮ ಸರ್ಕಾರದಲ್ಲಿ ಇರುವವರು ಇದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಮೂರು ತಿಂಗಳ ಹಿಂದೆಯೇ ಸರ್ಕಾರದವರು ಆರನೇ ವೇತನ ಆಯೋಗ, ಸರ್ಕಾರಿ ನೌಕರರೆಂದು ಪರಿಗಣಿಸುವ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಬೇಕಿತ್ತು. ಸಂಸ್ಥೆ ಲಾಭದಲ್ಲಿ ಬಂದರೆ ಮಾಡುತ್ತೇವೆ. ಈಗ ಸಣ್ಣಪುಟ್ಟ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಹೇಳಬೇಕಿತ್ತು. ಸಾರಿಗೆ ಸಂಸ್ಥೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಮೊದಲು ಅದನ್ನು ನಿಲ್ಲಿಸಬೇಕು. ವಿರೋಧ ಪಕ್ಷದವರ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

DKSHI SIDDARAMAIAH

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಜೊತೆಗೆ ಹೊಂದಾಣಿಕೆ ಇದ್ದಾರೆ. ಬೆಳಗ್ಗೆ ವಿರೋಧ ಪಕ್ಷದವರ ರೀತಿ ವರ್ತಿಸುತ್ತಾರೆ. ರಾತ್ರಿ ವಿಜಯೇಂದ್ರ ಹೋಗಿ ಅವರಿಗೆ ಸಮಾಧಾನ ಮಾಡಿ, ಬಹುಮಾನ ಕೊಡುತ್ತಾರೆ. ಯಡಿಯೂರಪ್ಪ ಸರ್ಕಾರ ನಡೆಸುತ್ತಿಲ್ಲ. ವಿಜಯೇಂದ್ರ ಮತ್ತು ಅವರ ಕುಟುಂಬದವರು ಸರ್ಕಾರ ನಡೆಸುತ್ತಿದ್ದಾರೆ. ಯಡಿಯೂರಪ್ಪನವರು ಸಹಿ ಮಾಡುತ್ತಾರೋ ಇಲ್ಲವೋ ಸಂಶಯವಿದೆ. ವಿಜಯೇಂದ್ರರೇ ಯಡಿಯೂರಪ್ಪನವರ ಸಹಿ ಮಾಡುತ್ತಾರೆ ಎಂಬ ಸಂಶಯವಿದೆ. ಯಡಿಯೂರಪ್ಪನವರಿಗೆ ಸಹಿ ಮಾಡಲು ಕೈ ನಡುಗುತ್ತವೆ, ಸಾವಿರಾರು ಫೈಲ್ ಇವೆ. ವಿಜಯೇಂದ್ರ ಚಿನ್ನದ ಅಂಗಡಿಯಲ್ಲಿ ಲೆಕ್ಕ ಹಾಕಿದಂತೆ ಫೈಲ್ ಲೆಕ್ಕ ಹಾಕುತ್ತಾರೆ. ಅಪ್ಪ ಸಹಿ ಹಾಕುವುದನ್ನು ನೋಡಿ, ಅವರಂತೆಯೇ ಬಿ.ಎಸ್.ಯಡಿಯೂರಪ್ಪ ಎಂದು ವಿಜಯೇಂದ್ರ ಸಹಿ ಮಾಡುತ್ತಾರೆ ಎಂದು ಸಿಎಂ ಹಾಗೂ ಪುತ್ರನ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *