ಬೆಂಗಳೂರು: ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಹುದಿನದ ಬೇಡಿಕೆ ಈಡೇರಿದೆ. ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಐತಿಹಾಸಿಕ ತೀರ್ಮಾನ ಮಾಡಿದಂತಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳ ಬೇಡಿಕೆ ಈಡೇರಿದೆ ಎಂದು ಹೇಳಿದರು.
ಈ ಬೇಡಿಕೆ ನನ್ನ ಒಬ್ಬನದ್ದಲ್ಲ. ಬೇಡಿಕೆ ಇಟ್ಟವರ ಧ್ವನಿಯಾಗಿ ಇಂದು ನಾನು ಸರ್ಕಾರದ ಮುಂದೆ ಮನವಿ ಮಾಡಿಕೊಂಡಿದ್ದೇನೆ. ಇಂದು ಆ ಮನವಿಯನ್ನು ಸ್ವೀಕಾರ ಮಾಡಿಕೊಂಡು ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಎಲ್ಲಾ ಸಚಿವರು ವಿಜಯನಗರ ಜಿಲ್ಲೆ ಆಗಲೇಬೇಕು ಎಂಬ ಒಂದೇ ತೀರ್ಮಾನಕ್ಕೆ ಬದ್ಧರಾಗಿ ಅನುಮೋದನೆ ತೆಗೆದುಕೊಂಡಿದ್ದಾರೆ. ತಾಂತ್ರಿಕವಾಗಿ ಯಾವ ರೀತಿ ಹಾಗೂ ಯಾವ ಯಾವ ತಾಲೂಕುಗಳನ್ನು ಸೇರಿಸಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡುತ್ತಾರೆ. ಪ್ರತಿಯೊಂದು ಒಳ್ಳೆಯ ಕೆಲಸಗಳಾಗಬೇಕಾದಾಗ ಒತ್ತಾಯಗಳು ಇರುತ್ತವೆ. ಆಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರಿಪಡಿಸಲಾಗುತ್ತದೆ ಎಂದರು.
ಮಿತ್ರ ಸೋಮಶೇಖರ್ ರೆಡ್ಡಿ ಅವರು ಜಿಲ್ಲೆ ಮಾಡಿದರೆ ಬಳ್ಳಾರಿ ಬಿಜೆಪಿಯಲ್ಲಿ 2 ಹೋಳಾಗುತ್ತೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್, ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಆದರೆ ಇದು ರಾಜ್ಯ ಹಾಗೂ ಇಡೀ ರಾಷ್ಟ್ರದ ತೀರ್ಮಾನವಾಗಿದೆ. ಹೀಗಾಗಿ ಖಂಡಿತವಾಗಿಯೂ ಅವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂ ಈ ತೀರ್ಮಾನ ಕೈಗೊಂಡಿದ್ದಾರೆ. ಸಚಿವ ಸಂಪುಟದಲ್ಲಿ ಭಾಗಿಯಾಗಿದ್ದ ಸಚಿವ ಶ್ರೀರಾಮುಲು ಕೂಡ ಈ ಕುರಿತು ಹೆಮ್ಮೆ ಪಟ್ಟರು. ವಿಜಯನಗರ ಸಾಮ್ರಾಜ್ಯ ಒಂದು ಇತಿಹಾಸದ ಪುಟಗಳಲ್ಲಿ ಸೇರಬೇಕಂದ್ರೆ ಖಂಡಿತವಾಗಿಯೂ ವಿಜಯನಗರ ಜಿಲ್ಲೆ ಆಗುವುದು ಸೂಕ್ತ ಎಂದು ತಿಳಿಸಿರುವುದಾಗಿ ಸಿಂಗ್ ಹೇಳಿದರು.
ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಶೀಘ್ರದಲ್ಲೇ ಜನ್ಮ ತಾಳಲಿದೆ. ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಜಿಲ್ಲೆ ರಚನೆಗೆ ತಾತ್ವಿಕ ಅನುಮೋದನೆ ಬರುತ್ತಿದೆ. ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಮಧುಸ್ವಾಮಿ, ವಿಜಯನಗರ ಜಿಲ್ಲೆ ಸ್ಥಾಪನೆಗೆ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ನೀಡಲಾಗಿದ್ದು, ಮುಂದಿನ ಸಭೆಯಲ್ಲಿ ಅಧಿಕೃತ ಅನುಮೋದನೆ ಸಿಗಲಿದೆ. ಜಿಲ್ಲೆಯ ರಚನೆ ಸಂಬಂಧ ಪ್ರಕ್ರಿಯೆ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.