– ಮಗುವಿನ ಜತೆ ಕಾಡಿನಲ್ಲೇ ಕಾಲ ಕಳೆದ ಗಟ್ಟಿಗಿತ್ತಿ
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ಕಾಡಿನ ದುರ್ಗಮ ಹಾದಿಯಲ್ಲಿ ಪ್ರಸವ ವೇದನೆ ತಾಳಲಾರದೆ ಪತಿಯೊಂದಿಗೆ ಆಸ್ಪತ್ರೆಗೆ ನಡೆದು ಹೋಗುತ್ತಿದ್ದ ಗರ್ಭಿಣಿಗೆ ರಸ್ತೆಯಲ್ಲೇ ಚೊಚ್ಚಲ ಹೆರಿಗೆಯಾಗಿರುವ ಘಟನೆ ತಡರಾತ್ರಿ ನಡೆದಿದೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಪತಿ ವಾಹನ ಕರೆ ತರಲು ಹೋದಾಗ ಕಾಡಿನಲ್ಲಿ ಹಸುಗೂಸಿನ ಜತೆ ಜೀವ ಹಿಡಿದು ಕಾಡಲ್ಲೇ ಕುಳಿತಿದ್ದಾಳೆ. ಈ ಗಟ್ಟಿಗಿತ್ತಿ ತಾಯಿಯನ್ನು ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಅಣ್ಣೇಹೊಲ ಗ್ರಾಮದ ವೀರಣ್ಣ ಪತ್ನಿ ಕಮಲ (22) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ಕಮಲ ಅವರಿಗೆ ಹೆರಿಗೆ ನೋವು ಕಾಣಿಕೊಂಡಿತ್ತು. ಕಾಡಂಚಿನ ಗ್ರಾಮವಾಗಿರುವುದರಿಂದ ವಾಹನ ಸಿಗದೆ ಪತಿ ವೀರಣ್ಣ ಪತ್ನಿಯನ್ನು ನಡೆಸಿಕೊಂಡೆ ಸುಮಾರು 5 ಕಿ.ಮೀ ದೂರದಲ್ಲಿರುವ ಮಹದೇಶ್ವರ ಬೆಟ್ಟದ ಸಾರ್ವಜನಿಕ ಆಸ್ಪತ್ರೆಗೆ ಹೊರಟ್ಟಿದ್ದಾರೆ. ಹೊಟ್ಟೆ ನೋವಿನೊಂದಿಗೆ ಭಾರದ ಹೆಜ್ಜೆ ಇಡುತ್ತಿದ್ದ ಗರ್ಭಿಣಿಗೆ ಕಾಡಿನ ರಸ್ತೆಯಲ್ಲೇ ಹೆರಿಗೆಯಾಗಿ ಹೆಣ್ಣು ಮಗು ಜನಿಸಿದೆ.
ತಾಯಿ ಮತ್ತು ಮಗುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು ವಾಹನ ಕರೆತರಲು ವೀರಣ್ಣ ಗ್ರಾಮದತ್ತ ತೆರಳಿದಾಗ ಕಗ್ಗತ್ತಲಲ್ಲಿ, ಕಾಡು ಪ್ರಾಣಿಗಳ ಭಯದ ನಡುವೆ ಮಗುವಿನೊಂದಿಗೆ ತಾಯಿ ಕಾಲ ದೂಡಿದ್ದಾಳೆ. ಬಳಿಕ ಪತಿ ವೀರಣ್ಣ ನೆರೆ ಹೊರೆಯವರೊಂದಿಗೆ ಸರಕು ಸಾಗಣೆ ವಾಹನವನ್ನು ಕರೆತಂದು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಚಿಕಿತ್ಸೆ ನೀಡಿದ ಡಾ.ಮುಕುಂದ ಮಗು 3 ಕೆ.ಜಿ ಇದ್ದು, ತಾಯಿ ಮತ್ತು ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.