ವಾರ್ನರ್, ಸಹಾ ಭರ್ಜರಿ ಆಟ – ಕೋಲ್ಕತ್ತಾ ಮನೆಗೆ ಹೈದರಾಬಾದ್ ಪ್ಲೇ ಆಫ್‍ಗೆ

Public TV
2 Min Read
srh

– ಶುಕ್ರವಾರ ಕೊಹ್ಲಿ, ವಾರ್ನರ್ ಮುಖಾಮುಖಿ

ಶಾರ್ಜಾ: ಇಂದು ನಡೆದ ಐಪಿಎಲ್-2020ಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

ಶಾರ್ಜಾ ಮೈದಾನದಲ್ಲಿ ನಡೆದ 56ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಶಹಬಾಜ್ ನದೀಮ್ ಮತ್ತು ಸಂದೀಪ್ ಶರ್ಮಾ ಅವರ ಬೌಲಿಂಗ್ ದಾಳಿಗೆ ತತ್ತರಿಸಿ. ನಿಗದಿತ 20 ಓವರಿನಲ್ಲಿ ಕೇವಲ 149 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಅವರ ಮುರಿಯದ 151 ಜೊತೆಯಾಟದಿಂದ ಇನ್ನೂ 18 ಬಾಲ್ ಉಳಿಸಿಕೊಂಡು ಗುರಿಯನ್ನು ಬೆನ್ನಟ್ಟಿತು.

ಕೊನೆಗೆ ಪ್ಲೇ ಆಫ್ ಆಯ್ಕೆ
ಈ ಬಾರಿಯ ಐಪಿಎಲ್‍ನಲ್ಲಿ ಲೀಗ್ ಹಂತದ 52 ಪಂದ್ಯಗಳು ಮುಗಿದಿದ್ದರೂ ಪ್ಲೇ ಆಫ್‍ಗೆ ಆಯ್ಕೆಯಾಗುವ ತಂಡಗಳು ಫೈನಲ್ ಆಗಿರಲಿಲ್ಲ. ಇಂದು ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಾಲ್ಕು ತಂಡಗಳು ಪ್ಲೇ ಆಫ್‍ಗೆ ಅಂತಿಮವಾಗಿ ಆಯ್ಕೆ ಆಗಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‍ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಪ್ರವೇಶಿಸಿವೆ.

ಈ ಮೂಲಕ ಗುರುವಾರ ದುಬೈಯಲ್ಲಿ ನಡೆಯಲಿರುವ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಮೊದೆಲೆರಡು ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ನಂತರ ಶುಕ್ರವಾರ ಅಬುಧಾಬಿಯಲ್ಲಿ ನಡೆಯಲಿರುವ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‍ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ನಂತರ ಎರಡನೇ ಎಲಿಮಿನೇಟರ್ ಭಾನುವಾರ ನಡೆಯಲಿದೆ.

ಮುಂಬೈ ನೀಡಿದ 150 ರನ್‍ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಆರಂಭದಿಂದಲೇ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಈ ಮೂಲಕ 31 ಬಾಲಿಗೆ ಅರ್ಧಶತಕ ಜೊತೆಯಾಟವಾಡಿದರು. ಪರಿಣಾಮ ಸನ್‍ರೈಸರ್ಸ್ ಹೈದರಾಬಾದ್ ತಂಡ ಪವರ್ ಪ್ಲೇ ಅಂತ್ಯದ ವೇಳಗೆ ಒಂದು ವಿಕೆಟ್ ಕಳೆದುಕೊಳ್ಳದೆ 56 ರನ್ ಪೇರಿಸಿತು.

ಈ ನಡುವೆ 35 ಬಾಲ್‍ಗೆ ನಾಯಕ ಡೇವಿಡ್ ವಾರ್ನರ್ ಅರ್ಧಶತಕ ಭಾರಿಸಿ ಮಿಂಚಿದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 48ನೇ ಅರ್ಧಶತಕ ಸಿಡಿಸಿದರು. ಇದರ ಜೊತೆಗೆ ಆರಂಭದಿಂದಲೂ ವಾರ್ನರ್ ಗೆ ಉತ್ತಮ ಸಾಥ್ ನೀಡಿದ ವೃದ್ಧಿಮಾನ್ ಸಹಾ 34 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಶತಕದ ಜೊತೆಯಾಟವಾಡಿ ಹೈದರಾಬಾದ್ ತಂಡವನ್ನು ಗೆಲುವಿನ ಸನಿಹಕ್ಕೆ ಕರೆದುಕೊಂಡು ಹೋದರು. ಸಹಾ ಮತ್ತು ವಾರ್ನರ್ ಮುರಿಯದ ಮೊದಲ ವಿಕೆಟಿಗೆ 151 ರನ್‍ಗಳ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸುವುದರ ಜೊತೆಗೆ ಪ್ಲೇ ಆಫ್‍ಗೆ ಕೆರೆದುಕೊಂಡು ಹೋದರು. ಡೇವಿಡ್ ವಾರ್ನರ್ 85 ರನ್(58 ಎಸೆತ, 10 ಬೌಂಡರಿ , 1 ಸಿಕ್ಸ್) ಸಹಾ 58 ರನ್(45 ಎಸೆತ, 7 ಬೌಂಡರಿ, 1 ಸಿಕ್ಸ್) ಹೊಡೆದರು.

Share This Article
Leave a Comment

Leave a Reply

Your email address will not be published. Required fields are marked *