– ‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ’
– ಆರೋಗ್ಯ ಇಲಾಖೆ ಒಳ, ಹೊರ ಗುತ್ತಿಗೆ ನೌಕರರ ಮುಷ್ಕರ
ಶಿವಮೊಗ್ಗ: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಕಳೆದ 15-20 ವರ್ಷಗಳಿಂದ ಒಳ ಹಾಗೂ ಹೊರಗುತ್ತಿಗೆ ಅಡಿಯಲ್ಲಿ ಕಡಿಮೆ ವೇತನಕ್ಕೆ ಆರೋಗ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ತಾರತಮ್ಯ ನಿವಾರಿಸುವಂತೆ ಹಾಗೂ ಗುತ್ತಿಗೆ ನೌಕರರನ್ನೇ ಖಾಯಂಗೊಳಿಸುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಿಬ್ಬಂದಿ ಆರೋಪಿಸಿದ್ದಾರೆ.
Advertisement
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ಹೇಮಲತಾ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ನ್ಯಾಯಾಲಯ ಸಹ ಹೇಳಿದೆ. ಈಗಿದ್ದರೂ ಸರ್ಕಾರ ನಮ್ಮನ್ನು ಅತ್ಯಂತ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದರು.
Advertisement
ಅಲ್ಲದೇ ಸರ್ಕಾರ ನಿರ್ಲಕ್ಷ್ಯ ಖಂಡಿಸಿ ಜೂನ್ 4 ರಿಂದ ಆರೋಗ್ಯ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗಿ ಮನೆಯಲ್ಲೇ ಕುಳಿತು ಅಸಹಕಾರ ಚಳುವಳಿ ಮಾಡುವುದಾಗಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಿಬ್ಬಂದಿ ತಿಳಿಸಿದ್ದಾರೆ.
Advertisement
Advertisement
ಕೊರೊನಾ ಸೋಂಕಿನ ಸಂದಿಗ್ಧ ಸಂದರ್ಭದಲ್ಲಿ ನಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಅದಕ್ಕೆ ಪ್ರತಿಯಾಗಿ ಸರ್ಕಾರ ಹೂ ಮಳೆ ಸುರಿಸಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದೆ. ಆದರೆ ಕೇವಲ ಅಷ್ಟೇ ಸಾಕಾ? ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಜೂನ್ 4 ರಿಂದ ಮುಷ್ಕರ ಕೈಗೊಂಡಿದ್ದು, ಒಂದು ವೇಳೆ ಏನಾದರೂ ಅನಾಹುತವಾದರೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತವಾಗಿ ಭರವಸೆ ನೀಡಿದರೆ ಮುಷ್ಕರ ಹಿಂಪಡೆಯುತ್ತೇವೆ. ಇಲ್ಲದಿದ್ದರೆ ರಾಜ್ಯಾದ್ಯಂತ ಸಾವಿರಾರು ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.