– 24 ಗಂಟೆಯಲ್ಲಿ ತನಿಖಾ ವರದಿ ನೀಡುವಂತೆ ಸಿಎಂ ಆದೇಶ
ಲಕ್ನೋ: ಬೆಳಗ್ಗೆ ವಾಕಿಂಗ್ ತೆರಳಿದ್ದ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಬಾಘಪತ್ ನಲ್ಲಿ ನಡೆದಿದೆ.
ಸಂಜಯ್ ಖೋಖರ್ ಕೊಲೆಯಾದ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ. ಇಂದು ಬೆಳಗ್ಗೆ ಎಂದಿನಂತೆ ಸಂಜಯ್ ಖೋಖರ್ ವಾಕಿಂಗ್ ಗೆ ತೆರಳಿದ್ದರು. ಮನೆಯ ಸಮೀಪದ ಕಬ್ಬಿನ ತೋಟದ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲೇ ಸಂಜಯ್ ಸಾವನ್ನಪ್ಪಿದ್ದಾರೆ. ಇನ್ನು ಸಿಎಂ ಯೋಗಿ ಆದಿತ್ಯನಾಥ್ ಪ್ರಕರಣದ ತನಿಖೆಯ ವರದಿಯನ್ನು 24 ಗಂಟೆಯಲ್ಲಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆ ಸಂಬಂಧ ಕೆಲ ವ್ಯಕ್ತಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಅನುಮಾನಗಳಿವೆ. ತನಿಖೆಯನ್ನು ಚುರುಕುಗೊಳಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳಿಲ್ಲ. ಮೃತದೇಹವನ್ನು ಮರೋಣತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಹೇಳಿದ್ದಾರೆ.