ಬೆಂಗಳೂರು: ನಗರ ಪೊಲೀಸರು ಗುರುವಾರ ಕಲಬುರಗಿಯಲ್ಲಿ ಒಂದು ಟನ್‍ಗೂ ಅಧಿಕ ಗಾಂಜಾವನ್ನು ಕುರಿ ಸಾಕುವ ಕೊಟ್ಟಿಗೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಇಷ್ಟು ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಬಳಿಕ ಅದರ ವಿಲೇವಾರಿಯನ್ನು ಹೇಗೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಏಳುವುದು ಸಹಜ ಸಂದರ್ಭದಲ್ಲಿ
2018ಕ್ಕೂ ಮುನ್ನ ಬೆಂಗಳೂರು ಪೊಲೀಸರು ನ್ಯಾಯಾಲಯದ ಆದೇಶವನ್ನು ಪಡೆದು ಸೀಜ್ ಮಾಡಿದ್ದ ಮಾದಕ ವಸ್ತುಗಳನ್ನು ಆಯಾ ಪೊಲೀಸ್ ಠಾಣೆಗಳ ಬಳಿ ಸುಡುತ್ತಿದ್ದರು. ಆದರೆ ಬೃಹತ್ ಪ್ರಮಾಣದ ಮಾದಕ ದ್ರವ್ಯಗಳನ್ನು ಸುಡುವುದು ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‍ಸ್ಟೆನ್ಸಸ್ (ಎನ್‍ಡಿಪಿಎಸ್) ಕಾಯ್ದೆಗೆ ವಿರುದ್ಧವಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತು ಉಪ ಪೊಲೀಸ್ ಆಯುಕ್ತರು ನೋಡಲ್ ಅಧಿಕಾರಿಗಳೊಂದಿಗೆ ಮಾದಕ ವಸ್ತುಗಳನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುತ್ತಾರೆ. ಇದನ್ನೂ ಓದಿ: ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಮೆತ್ತಿದಂತೆ- ಬಿಜೆಪಿಗೆ ಕೈ ಟಾಂಗ್
ಬೃಹತ್ ಪ್ರಮಾಣದ ಮಾದಕ ವಸ್ತು ಸೀಜ್ ಮಾಡಿದಾಗ ಏನಾಗುತ್ತೆ?
2015ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಕಂದಾಯ ಇಲಾಖೆಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಯಾವುದೇ ಸಂದರ್ಭದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಮಾದಕ ವಸ್ತುಗಳ ದುರುಪಯೋಗ ತಪ್ಪಿಸಲು ಕೇಂದ್ರ ಆದೇಶ ನೀಡಿದೆ. ಸಣ್ಣ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಸಂಗ್ರಹಿಸಿಟ್ಟ ಸ್ಥಳದಿಂದಲೇ ಹಲವು ಬಾರಿ ಅವು ನಾಪತ್ತೆಯಾಗಿರುವ ಉದಾಹರಣೆಗಳಿವೆ. ಆದ್ದರಿಂದ ವಶಪಡಿಸಿಕೊಂಡ ವಸ್ತುಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದನ್ನು ನಾಶಪಡಿಸಬೇಕಿದೆ.
ಸದ್ಯ ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದಿರುವ ಮಾದಕ ದ್ರವ್ಯಗಳನ್ನು ಪೊಲೀಸ್ ಆಯುಕ್ತರ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ. ಈ ರೀತಿ ಸಂಗ್ರಹಿಸಿದ ಎಲ್ಲಾ ವಸ್ತುಗಳ ಫೋಟೋ ಹಾಗೂ ವಿಡಿಯೋ ಮಾಡಿ ಮ್ಯಾಜಿಸ್ಟ್ರೇಟರ್ ಗೆ ಸಲ್ಲಿಸಲಾಗುತ್ತದೆ. ಆ ಬಳಿಕ ಅವರು ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲು ಆದೇಶ ನೀಡುತ್ತಾರೆ. ನ್ಯಾಯಾಲಯದ ಆದೇಶವಿಲ್ಲದೇ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ನಾಶಪಡಿಸಲು ಅವಕಾಶವಿಲ್ಲ ಎಂದು 2015ರ ಸರ್ಕಾರದ ಆದೇಶ ತಿಳಿಸುತ್ತದೆ. ಇದನ್ನೂ ಓದಿ: 6 ಕೋಟಿ ಗಾಂಜಾ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತ
ವಿಲೇವಾರಿ ಪ್ರಕ್ರಿಯೆ ಹೇಗೆ?
2015ರ ಆದೇಶದ ಅನ್ವಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡಗಳಿಗೆ ಅನುಗುಣವಾಗಿ ಮಾದಕ ವಸ್ತುಗಳ ವಿಲೇವಾರಿ ಪ್ರತಿಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ಸ್ಥಾಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಜಂಟಿ ಆಯುಕ್ತರು ಹಾಗೂ ಪಿಸಿಬಿ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ ಗುಪ್ತಚರ ನಿರ್ದೇಶನಾಲಯದ ಜಂಟಿ ನಿರ್ದೇಶಕರು ಇರುತ್ತಾರೆ. ಮಾದಕ ವಸ್ತುಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹೊಂದಿದ್ದಾರೆ ಮಾತ್ರ ಪೊಲೀಸರಿಗೆ ವಿಲೇವಾರಿ ಮಾಡಲು ಅನುಮತಿ ಇದೆ.
ಮಾದಕ ವಸ್ತುಗಳಾದ ಹೆರಾಯಿನ್ 5 ಕೆಜಿ, ಚರಸ್ 100 ಕೆಜಿ, ಹಶೀಶ್ ಆಯಿಲ್ 20 ಕೆಜಿ, ಗಾಂಜಾ 1 ಟನ್, ಕೊಕೇನ್ 2 ಕೆಜಿ, ಮ್ಯಾಂಡ್ರಾಕ್ಸ್ 3 ಟನ್, ಪೋಪಿಪಿ ಸ್ಟ್ರಾ 3 ಟನ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡರೆ ನಿಯಮಗಳ ಅನ್ವಯ ವಿಲೇವಾರಿ ಮಾಡಬೇಕಾಗುತ್ತದೆ.
2 ಕೆಜಿ ಗಾಂಜಾ ಪ್ರಕರಣದ ಜಾಡು ಹಿಡಿದು 1350.3ಕೆಜಿಯಷ್ಟು ಗಾಂಜಾ ಜಪ್ತಿ ಮಾಡಿ 4 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಕೇಂದ್ರ ವಿಭಾಗದ @sspuramps ತಂಡದ ಕಾರ್ಯಾಚರಣೆಯನ್ನು ಶ್ಲಾಘಿಸುತ್ತ, ಭಾಗಿಯಾದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ಮತ್ತು 2 ಲಕ್ಷ ರೂ.ಗಳ ನಗದು ಬಹುಮಾನವನ್ನು ನೀಡಲಾಗಿದೆ. pic.twitter.com/Fe5mNmE4bS
— Kamal Pant, IPS (@CPBlr) September 10, 2020
ವಿಲೇವಾರಿ ಹೇಗೆ?
2018ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯದಿಂದ ಮಾಗಡಿಯಲ್ಲಿ ಕಾರ್ಖಾನೆಯನ್ನು ಗುರುತಿಸಲಾಗಿದ್ದು, ಅಲ್ಲಿ ಮಾದಕ ವಸ್ತುಗಳ ವಿಲೇವಾರಿ ಮಾಡಲಾಗುತ್ತದೆ. ಇಲ್ಲಿ ಸುಮಾರು 1000 ಡಿಗ್ರಿ ತಾಪಮಾನ ಹೊಂದಿರುವ ಬಾಯ್ಲರ್ ಬಳಸಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಸಿಂಥೆಟಿಕ್ ಡ್ರಗ್ಸ್ ಗಳನ್ನು ಮರುಬಳಕೆ ಮಾಡಲು ಎನ್‍ಡಿಪಿಎಸ್ ಕಾಯ್ದೆಯ ಅನ್ವಯ ಹರಾಜು ಹಾಕಲು ಅವಕಾಶವಿದೆ. ಆದರೆ ಡ್ರಗ್ಸ್ ದುರುಪಯೋಗವಾಗುವ ಭಯದಿಂದ ನಾವು ಹರಾಜು ಹಾಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್’ ರೌಡಿ ತಂಗಂ ಕುಟುಂಬದವರಿಂದ ಗಾಂಜಾ ದಂಧೆ
ಉಳಿದಂತೆ ಸಣ್ಣ ಪ್ರಮಾಣದಲ್ಲಿ ಪೊಲೀಸರು ವಶಪಡಿಸಿಕೊಳ್ಳುವ, ಅಂದರೆ 100 ಅಥವಾ 200 ಗ್ರಾಂ ತೂಕದ ಗಾಂಜಾ, ಹಶೀಶ್ ಅಥವಾ ಹ್ಯಾಶ್ ಆಯಿಲ್ ಗಳಂತಹ ಮಾದಕ ವಸ್ತುಗಳನ್ನು ಪೊಲೀಸರೇ ವಿಲೇವಾರಿ ಮಾಡುತ್ತಾರೆ. ಈ ಪ್ರಕ್ರಿಯೆಯನ್ನು ಖಾಲಿ ಸ್ಥಳದಲ್ಲಿ, ಅದು ತಡರಾತ್ರಿಯಲ್ಲಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಇಲಾಖೆ ಮಾದಕ ವಸ್ತುಗಳ ಜಟಿಲ ಜಾಲವನ್ನು ಭೇದಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುತ್ತದೆ. 1 ಕೋಟಿ 20 ಲಕ್ಷದ 40 ಸಾವಿರಕ್ಕೂ ಹೆಚ್ಚು ಮೊತ್ತದ ಡ್ರಗ್ಸ್ ಜಾಲವನ್ನು ಭೇದಿಸಿ, 20 ಆರೋಪಿಗಳನ್ನು ಬಂಧಿಸಿ, 10 ಪ್ರಕರಣಗಳನ್ನು ದಾಖಲಿಸಿರುವ ಆಗ್ನೇಯ ವಿಭಾಗದ ಪೊಲೀಸರ ಕಾರ್ಯಾಚರಣೆಯನ್ನು ಪ್ರಶಂಸಿಸುತ್ತಾ 50,000₹ ಬಹುಮಾನ ನೀಡಲಾಗಿದೆ. pic.twitter.com/eHt3hsmNLH
— Kamal Pant, IPS (@CPBlr) September 7, 2020