ಯಾದಗಿರಿ: ಹೊರರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರ ಸ್ಥಿತಿ ಹೇಳತೀರದ್ದಾಗಿದೆ. ನೆಲೆಯಿಲ್ಲದೆ ಸುಡು ಬಿಸಿಲಿನಲ್ಲಿ ಬಾಣಂತಿ, ಮಕ್ಕಳು ಮತ್ತು ವೃದ್ಧರು ಸಾಯುತ್ತಿದ್ದಾರೆ. ತಿನ್ನಲು ಊಟವಿಲ್ಲದೆ ಕಳೆದ ನಾಲ್ಕು ದಿನದಿಂದ ಮಕ್ಕಳು ಬಿಸ್ಕತ್ತು ತಿಂದುಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ಮನಕಲಕುವಂತಿದೆ.
ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮಹಾರಾಷ್ಟ್ರದಿಂದ ಯಾದಗಿರಿಗೆ ಮತ್ತೆ ವಾಪಸ್ ಬಂದ ವಲಸೆ ಕೂಲಿ ಕಾರ್ಮಿಕರನ್ನು ಕೇಳುವವರೆ ಇಲ್ಲವಾಗಿದೆ. ವಲಸೆ ಕೂಲಿ ಕಾರ್ಮಿಕರು ಪಡುತ್ತಿರುವ ಕಷ್ಟ ನೋಡಿದರೆ ನರಕದಲ್ಲೂ ಈ ರೀತಿಯ ಶಿಕ್ಷೆ ಇರಲ್ಲಾ ಅನ್ನಸುತ್ತೆ. ಕೂಲಿ ಕಾರ್ಮಿಕರು ಅನುಭವಿಸುತ್ತಿರುವ ಯಾತನೆಯ ಒಂದೊಂದು ದೃಶ್ಯಗಳು ಕರಳು ಹಿಂಡುತ್ತೆ.
ಹೊರ ರಾಜ್ಯಗಳಿಂದ ಬಂದ ವಲಸೆ ಕೂಲಿ ಕಾರ್ಮಿರನ್ನು ಕ್ವಾರೆಂಟೈನ್ ಮಾಡದೆ ಇರುವ ಕಾರಣ ಸುಡು ಬಿಸಿನಲ್ಲಿಯೇ ಛತ್ರಿಯ ಕೆಳಗೆ, ಮರದ ಕೆಳಗೆ ಮತ್ತು ದೇವಸ್ಥಾನದಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿದ್ದಾರೆ. ಸುರಪುರ ತಾಲೂಕಿನ ಏವೂರ ತಾಂಡದ ಹೊರ ವಲಯದಲ್ಲಿ ಕಳೆದ ನಾಲ್ಕೈದು ದಿನದಿಂದ ಇಂತಹ ಮನಕಲಕುವ ದೃಶ್ಯಗಳು ಕಂಡು ಬರುತ್ತಿವೆ. ಇದನ್ನು ನೋಡಿದರೆ ಸುರಪುರ ತಹಶೀಲ್ದಾರ್ ಅವರಿಗೆ ಮಾನವೀಯತೆಯೆ ಮರೆತು ಹೋಗಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ಮಹಾರಾಷ್ಟದಿಂದ ಬಂದ ಕೂಲಿ ಕಾರ್ಮಿಕರಿಗೆ ಕ್ವಾರೆಂಟನ್ ಮಾಡಲು ಸುರಪುರ ತಹಶೀಲ್ದಾರ್ ನಿಂಗಣ್ಣ ಅವರು ಉದ್ಧಟತನ ತೋರುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಕಳೆದ ನಾಲ್ಕೈದು ದಿನದಿಂದ ಕಾರ್ಮಿಕರು ಜಮೀನಲ್ಲಿ ಛತ್ರಿಯ ಕೇಳಗೆ ಜೀವ ಸಾಗಿಸುವಂತಾಗಿದೆ. ಅತ್ತ ಊರ ಒಳಗೆ ಹೋಗಲು ಆಗದೇ, ಇತ್ತ ತಹಶೀಲ್ದಾರ್ ಅವರ ನಿರ್ಲಕ್ಷ್ಯದಿಂದ ಕ್ವಾರೆಂಟನ್ ಆಗದೇ ಕಾರ್ಮಿಕರ ಸಂಕಷ್ಟಕ್ಕೆ ಸಿಲುಕಿದ್ದಾರೆ.