ನವದೆಹಲಿ: ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಭಾರತೀಯ ಸೇನೆಯ ಯೋಧ ಉಗ್ರರನ್ನು ಸೆದೆಬಡಯುವ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದು, ಸುದ್ದಿ ತಿಳಿದ ಕುಟುಂಬದ್ಥರು ಆಘಾತಕ್ಕೊಳಗಾಗಿದ್ದಾರೆ.
Advertisement
ಜಮ್ಮು ಕಾಶ್ಮೀರದ ಮಚಿಲಿ ಸೆಕ್ಟರ್‍ನಲ್ಲಿ ನಡೆದ ಉಗ್ರ ವಿರೋಧಿ ಕಾರ್ಯಾಚರಣೆ ವೇಳೆ ತೆಲಂಗಾಣ ಮೂಲದ ರಿಯಾಡಾ ಮಹೇಶ್ ಹುತಾತ್ಮರಾಗಿದ್ದಾರೆ. ಮಹೇಶ್ ಕಳೆದ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ತೆಲಂಗಾಣದ ಮೂಲದವರಾಗಿದ್ದ ಇವರು ಭಾನುವಾರ ನಡೆದ ಕಾರ್ಯಾಚರಣೆ ವೇಳೆ ಹುತ್ಮಾತ್ಮರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮಹೇಶ್ ಪತ್ನಿ ಸುಹಾಸಿನಿ ಹಾಗೂ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ ನಿಜಾಮಾಬಾದ್ ಜಿಲ್ಲೆಯ ಮೇಲ್ಪುರದ ಕೋಮನ್‍ಪಲ್ಲಿ ಗ್ರಾಮದ ಅವರ ಮನೆಯಲ್ಲಿ ಕಗ್ಗತ್ತಲು ಆವರಿಸಿದಂತಾಗಿದೆ.
Advertisement
Advertisement
ಭಾನುವಾರ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ಮೂವರು ಯೋಧರು ಹಾಗೂ ಒಬ್ಬ ಬಿಎಸ್‍ಎಫ್ ಕಾನ್‍ಸ್ಟೇಬಲ್ ಪೈಕಿ ಮಹೇಶ್ ಸಹ ಒಬ್ಬರು. ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲಿ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರರ ನುಸುಳುವಿಕೆಯನ್ನು ತಡೆಯುವ ವೇಳೆ ಈ ಯೋಧರು ಹುತಾತ್ಮರಾಗಿದ್ದಾರೆ.
Advertisement
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಇರಳದ ರೆಡ್ಡಿವರಿಪಲ್ಲಿ ಮೂಲದ ಹವಾಲ್ದಾರ್ ಪ್ರವೀಣ್ ಕುಮಾರ್ ರೆಡ್ಡಿ(37), ಸೇನೆ ಅಧಿಕಾರಿ ಕ್ಯಾಪ್ಟನ್ ಅಶುತೋಷ್ ಕುಮಾರ್ ಹಾಗೂ ಬಿಎಸ್‍ಎಫ್ ಪೇದೆ ಸುದೀಪ್ ಸರ್ಕಾರ್ ಸಹ ಈ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದಾರೆ. ಉಗ್ರರು ಬಲಿಯಾಗುವುದಕ್ಕೂ ಮುನ್ನ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇದೀಗ ಸಾವನ್ನಪ್ಪಿದ ಸೈನಿಕರ ಅಂತ್ಯಸಂಸ್ಕಾರ ಮಾಡಲು ಸೇನೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಹೇಶ್ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. ತುಂಬಾ ಕಷ್ಟ ಪಟ್ಟು ಸೇನೆಗೆ ಸೇರಿಕೊಂಡಿದ್ದರು. ಇವರ ಪೋಷಕರಾದ ರಿಯಾಡಾ ರಾಜು ಹಾಗೂ ಗಂಗಮಲ್ಲು ಇಬ್ಬರೂ ರೈತರು. ಆರ್ಮಿ ಆಫೀಸರ್ ಪುತ್ರಿ ಸುಹಾಸಿನಿ ಅವರನ್ನು ಮಹೇಶ್ ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಒಬ್ಬ ಸಹೋದರನನ್ನು ಹೊಂದಿದ್ದು, ಮಹೇಶ್ ಕಿರಿಯರು. ಇವರ ಅಣ್ಣ ಗಲ್ಫ್‍ನಲ್ಲಿ ಕೆಲಸ ಮಾಡುತ್ತಾರೆ.
ಮಗನನ್ನು ಕಳೆದುಕೊಂಡಿದ್ದಕ್ಕೆ ಇದೀಗ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ. ಈ ವೇಳೆ ಮಗನ ಸಂಭಾಷಣೆ ಕುರಿತು ಅವರು ನೆನಪಿಸಿಕೊಂಡಿದ್ದಾರೆ. ನವೆಂಬರ್ 2ರಂದು ಕೊನೇಯ ಬಾರಿ ಕರೆ ಮಾಡಿದ್ದ. ಹತ್ತಿರದ ಪ್ರದೇಶದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಗಸ್ತಿಗೆ ಹೊರಟಿರುವುದಾಗಿ ತಿಳಿಸಿದ್ದ. ಅದೇ ಕೊನೇಯ ಬಾರಿ ಅವನ ಬಳಿ ಮಾತನಾಡಿದ್ದು ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಮಹೇಶ್ ಅವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಲಾಗಿತ್ತು. ಬಳಿಕ ಸಾವನ್ನಪ್ಪಿರುವ ಕುರಿತು ಸೇನೆ ತಿಳಿಸಿದೆ. ಈ ವೇಳೆ ಮಹೇಶ್ ಕೊನೇಯ ಬಾರಿ ಮನೆಗೆ ಭೇಟಿ ನೀಡಿದ್ದನ್ನು ಕುಟುಂಬಸ್ಥರು ನೆನಪಿಸಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್‍ನಲ್ಲಿ ಕೊನೇಯ ಬಾರಿ ಊರಿಗೆ ಬಂದಿದ್ದ. ಈ ವೇಳೆ ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿ ಕಂಡು ಎಚ್ಚರದಿಂದ ಇರುವಂತೆ ತಿಳಿಸಿದ್ದೆವು ಎಂದು ಕುಟುಂಬಸ್ಥರು ವಿವರಿಸಿದ್ದಾರೆ.
ನಿಜಾಮಾಬಾದ್‍ನ ಖಾಸಗಿ ಕಾಲೇಜಿನಲ್ಲಿ ಪಿಯು ಮುಗಿಸಿದ್ದ ಮಹೇಶ್, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ 2014-15ರಲ್ಲಿ ಸೇನೆ ಸೇರಿದ್ದರು. ತರಬೇತಿ ಬಳಿಕ ಅವರನ್ನು ಅಸ್ಸಾಂಗೆ ಪೋಸ್ಟಿಂಗ್ ಹಾಕಲಾಗಿತ್ತು. ಬಳಿಕ ಡೆಹ್ರಾಡೂನ್ ನಂತರ ಜಮ್ಮು ಕಾಶ್ಮೀರಕ್ಕೆ ವರ್ಗಾಯಿಸಲಾಗಿತ್ತು.