– ಮೂರು ದಿನ ಒತ್ತೆಯಳಾಗಿರಿಸಿಕೊಂಡು ಹಣಕ್ಕೆ ಬೇಡಿಕೆ
ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನ ಅಪಹರಣ ಮಾಡಿ ಮೂರು ದಿನ ಕೂಡಿಟ್ಟು ಬಿಡುಗಡೆಗೊಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪ್ರಕಾಶ್, ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನವೆಂಬರ್ 25ರಂದು ಕೋಲಾರದ ಬೇಗ್ಲಿಯ ಹೊಸಹಳ್ಳಿಯಲ್ಲಿ ಸುಮಾರು ಎಂಟು ಜನರು ನನ್ನ ಮೇಲೆ ಹಲ್ಲೆ ಮಾಡಿದರು. ಮೂರು ದಿನಗಳ ಕಾಲ ಒತ್ತೆಯಾಗಿರಿಸಿಕೊಂಡು 30 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದರು. ನನ್ನ ಕೈ ಮತ್ತು ಕಾಲಿನ ಭಾಗದಲ್ಲಿ ಅಪಹರಣಕಾರರು ಹಲ್ಲೆ ನಡೆಸಿದ್ದಾರೆ. ಜೊತೆಯಲ್ಲಿದ್ದ ಚಾಲಕ ಸುನಿಲ್ ಮೇಲೆಯೂ ಹಲ್ಲೆ ನಡೆದಿದೆ. ಆದ್ರೆ ಸುನಿಲ್ ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಮೂರು ದಿನಗಳ ಬಳಿಕ ನನ್ನನು ಹೊಸಕೋಟೆಯಲ್ಲಿ ಬಿಟ್ಟು ಅಪಹರಣಕಾರರು ಎಸ್ಕೇಪ್ ಆಗಿದ್ದಾರೆ ಎಂದು ವರ್ತೂರು ಪ್ರಕಾಶ್ ದೂರಿನಲ್ಲಿ ದಾಖಲಸಿದ್ದಾರೆ.
ದೂರು ದಾಖಲಿಸಿ ಹೊರ ಬಂದ ವರ್ತೂರು ಪ್ರಕಾಶ್ ಯಾವುದೇ ಹೇಳಿಕೆ ನೀಡದೇ ಹೋಗಿದ್ದಾರೆ. ಮೂರು ದಿನಗಳ ಹಿಂದೆ ನಂಬರ್ ಪ್ಲೇಟ್ ಇಲ್ಲದ ಕಾರ್ ಜುನ್ನಸಂದ್ರದಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಬಗ್ಗೆ ಬೆಳ್ಳಂದೂರರು ಠಾಣೆಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.