– ಪ್ರಮುಖ ಅರೋಪಿ ಕವಿರಾಜ್ ವಿಚಾರಣೆ ವೇಳೆ ಹೇಳಿಕೆ
ಕೋಲಾರ: ಆ ಒಬ್ಬ ಮಾಜಿ ಸಚಿವನನ್ನು ಕಿಡ್ನಾಪ್ ಮಾಡಿ ಅವನ ಬಳಿ ಕೋಟ್ಯಂತರ ರೂಪಾಯಿ ಸಣ ವಸೂಲಿ ಮಾಡಬಹುದು ಎಂದು ಹೇಳಿದ್ದ ಅಧಿಕಾರಿಯೊಬ್ಬನ ಮಾತು ಕೇಳಿ ಸೆಂಟ್ರಲ್ ಜೈಲ್‍ನಲ್ಲಿದ್ದ ಇಬ್ಬರು ಖೈದಿಗಳು ಸ್ಕೆಚ್ ಹಾಕಿದ್ದರು. ಆದರೆ ಅಂದುಕೊಂಡಷ್ಟು ಹಣ ಸಿಗಲಿಲ್ಲ. ಅಲ್ಲದೆ ಸ್ಕೆಚ್ ಹಾಕಿದ್ದ ಆರೋಪಿಗಳು ಸಹ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಅಂದರ್ ಆಗಿದ್ದಾರೆ.
ಕಿಡ್ನಾಪ್ ಆಗಿ 20 ದಿನಗಳ ನಂತರ ಕಿಂಗ್‍ಪಿನ್ ಕವಿರಾಜ್ ಬಂಧನದ ಮೂಲಕ ಎಲ್ಲ ಅನುಮಾನಗಳಿಗೂ ಉತ್ತರ ಸಿಕ್ಕಿದೆ. ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿಯನ್ನು ಕೋಲಾರ ಪೊಲೀಸರ ತಂಡ ಯಶಸ್ವಿಯಾಗಿ ಬೇದಿಸಿದ್ದು, ಸೆಂಟ್ರಲ್ ಜೈಲ್‍ನಲ್ಲಿ ಸ್ಕೆಚ್ ಹಾಕಿರುವುದಾಗಿ ಕವಿರಾಜ್ ಒಪ್ಪಿಕೊಂಡಿದ್ದಾನೆ. ಅಲ್ಲದೆ ಹಣಕ್ಕಾಗಿ ಅಪಹರಿಸಿರುವುದಾಗಿ ಸಹ ವಿಚಾರಣೆ ವೇಳೆ ಹೇಳಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಬಂಧಿತ ಆರೋಪಿ ಕವಿರಾಜ್ ಅಂಡರವರ್ಲ್ಡ್ ರವಿಪೂಜಾರಿ ಬಂಟ ಎನ್ನಲಾಗಿದೆ. ಮೂಲತ: ತಮಿಳುನಾಡಿನ ಹೊಸೂರಿನವನಾಗಿದ್ದು, ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕೋಲಾರ ಪೊಲೀಸರ ತಂಡ ತಮಿಳುನಾಡಿನಲ್ಲಿ ಬಂಧಿಸಿ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಮತ್ತೆ ಕೋಲಾರ ಪೊಲೀಸರು ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್‍ನನ್ನು ತಮ್ಮ ವಶಕ್ಕೆ ಪಡೆದು ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸುವ ಜೊತೆಗೆ ಇಡೀ ಪ್ರಕಣದ ಸತ್ಯಾಂಶವನ್ನು ಬಿಚ್ಚಿಡಲಿದ್ದಾರೆ.
ರಾಜ್ಯದಲ್ಲಿ ಸದ್ದು ಮಾಡಿದ್ದ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಕೊನೆ ಹಂತಕ್ಕೆ ಬಂದು ತಲುಪಿದೆ. ಪ್ರಭಾವಿ ಮುಖಂಡನನ್ನು ಕಿಡ್ನಾಪ್ ಮಾಡಿದ್ದಾರೆ ಅಂದ್ರೆ ಸಾಮಾನ್ಯ ಜನರ ಪಾಡೇನು ಎನ್ನುವಷ್ಟರ ಮಟ್ಟಿಗೆ ಈ ಪ್ರಕರಣ ಸದ್ದು ಮಾಡಿತ್ತು. ಅಷ್ಟೇ ಅಲ್ಲ ಈ ಪ್ರಕರಣ ವರ್ತೂರ್ ಪ್ರಕಾಶ್ ವಿರುದ್ಧ ಸಾಕಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿತ್ತು.
ಕಿಡ್ನಾಪ್‍ಗೂ ಮೊದಲು ಮಾಸ್ಟರ್ ಮೈಂಡ್ ಕವಿರಾಜ್ ಹಾಗೂ ಆತನ ಸ್ನೇಹಿತ ರೋಹಿತ್ ಜೈಲಿನಲ್ಲಿದ್ದ ಅಧಿಕಾರಿಯೊಬ್ಬರ ಮಾತು ಕೇಳಿ ವರ್ತೂರ್ ಪ್ರಕಾಶ್ ಬಳಿ ಸಾಕಷ್ಟು ಹಣವಿದೆ, ಕಳೆದ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಕೋಟ್ಯಂತರ ರೂಪಾಯಿ ಹಣ ಮಾಡಿದ್ದಾರೆಂದು ಹೇಳಿದ್ದಾರೆ. ಅದೇ ಪ್ಲಾನ್‍ನನ್ನು ವರ್ಕೌಟ್ ಮಾಡಿದ ರೋಹಿತ್ ಮತ್ತು ಕವಿರಾಜ್ ತಂಡ ಕಟ್ಟಿಕೊಂಡು ತಾವಂದುಕೊಂಡಂತೆ ವರ್ತೂರ್ ಪ್ರಕಾಶ್‍ರನ್ನು ಕಿಡ್ನಾಪ್ ಮಾಡಿದ್ದರು.
ಸದ್ಯ ಕಿಡ್ನಾಪ್ ಪ್ರಕರಣದ ಕಿಂಗ್‍ಪಿನ್ ಕವಿರಾಜ್ ಬಂಧನದ ಬಗ್ಗೆ ಪ್ರತಿಕ್ರಿಯಸಿರುವ ವರ್ತೂರ್ ಪ್ರಕಾಶ್, ಕಠಿಣವಾಗಿದ್ದ ಕಿಡ್ನಾಪ್ ಪ್ರಕರಣವನ್ನು ಬೆಂಗಳೂರು ಪೊಲೀಸರ ರೀತಿಯಲ್ಲಿ ಕೋಲಾರ ಪೊಲೀಸರು ಕೂಡ ಯಶಸ್ವಿಯಾಗಿ ಇಷ್ಟು ಬೇಗ ಬೇಧಿಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಹೀಗಾಗಿ ಕೋಲಾರ ಪೊಲೀಸರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಅವರನ್ನು ಸಂಪೂರ್ಣ ವಿಚಾರಣೆ ನಡೆಸಿ ಕಿಡ್ನಾಪ್ ಪ್ರಕರಣ ಹಣಕ್ಕಾಗಿ ನಡೆದಿದ್ದಾ ಅಥವಾ ಯಾರಾದರೂ ಸುಪಾರಿ ಕೊಟ್ಟಿದ್ದರಾ ಎಂಬ ಎಲ್ಲ ವಿಚಾರಗಳಿಗೆ ಉತ್ತರ ಸಿಗಬೇಕಿದೆ ಎಂದರು.
ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ ಅದನ್ನು ಬೇಧಿಸಿದ ಖುಷಿ ಪೊಲೀಸರಿಗಿದೆ. ಕಿಡ್ನಾಪ್ ಪ್ರಕರಣದಿಂದ ತನ್ನ ಸುತ್ತ ಸುತ್ತಿಕೊಂಡಿದ್ದ ಹಲವು ಅನುಮಾನಗಳಿಗೆ ತೆರೆ ಬಿತ್ತಲ್ಲ ಎನ್ನುವ ಸಂತೋಷ ವರ್ತೂರ್ ಪ್ರಕಾಶ್ ಅವರದ್ದಾಗಿದೆ.