– ಕಿಡ್ನ್ಯಾಪ್ ಕಹಾನಿಗೆ ಹನಿಟ್ರ್ಯಾಪ್ ಲಿಂಕ್!
ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಮಹಾ ರಹಸ್ಯ ಬಯಲಾಗಿದೆ. ಮಾಜಿ ಸಚಿವರು ಹನಿಟ್ರ್ಯಾಪ್ ನಲ್ಲಿ ಸಿಲುಕಿದ್ರಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.
ವರ್ತೂರು ಪ್ರಕಾಶ್ ಅವರ ಕಾರಿನಲ್ಲಿ ವೇಲ್ ಮಾದರಿಯ ಬಟ್ಟೆ ಪತ್ತೆಯಾಗಿದ್ದು, ಮಾಜಿ ಸಚಿವರು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ರಾ ಎಂಬ ಅನುಮಾನಗಳು ದಟ್ಟವಾಗ್ತಿವೆ. ತಮ್ಮನ್ನ ಅಪಹರಿಸಿದವರು ಯಾರು ಎಂದು ತಿಳಿದಿದ್ದರೂ ವರ್ತೂರು ಪ್ರಕಾಶ್ ಅಪಹರಣಕಾರರ ಹೆಸರು ಹೇಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಕಾರಿನಲ್ಲಿ ಸಿಕ್ಕ ವೇಲ್ ಸುತ್ತ ಸಾಕಷ್ಟು ಅನುಮಾನದ ಹುತ್ತ ಹುಟ್ಟಿಕೊಂಡಿದೆ. ಅಪಹರಣ ವೇಳೆ ವರ್ತೂರು ಪ್ರಕಾಶ್ ಕಾರಿನಲ್ಲಿ ಯಾರಿದ್ರು ಎಂಬುದರ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಿಲ್ಲ.
ಇನ್ನೂ ವರ್ತೂರು ಪ್ರಕಾಶ್ ನೀಡಿರುವ ಹೇಳಿಕೆಗಳಿಗೂ ಘಟನೆಗಳಿಗೂ ಸಾಮ್ಯತೆ ಕಂಡು ಬಂದಿಲ್ಲ. ಹಣಕಾಸು ವ್ಯವಹಾರದ ಜೊತೆ ಹುಡುಗಿಯ ನಂಟು ಪ್ರಕರಣದಲ್ಲಿ ಸೇರ್ಪಡೆಯಾಗಿದೆ. ವರ್ತೂರು ಪ್ರಕಾಶ್ ಪುಣೆ ಮೂಲದ ವ್ಯಕ್ತಿಯೊಬ್ಬರಿಂದ 10 ಕೋಟಿ ರೂ. ಸಾಲ ಪಡೆದಿದ್ದರು. ಆ ಹಣ ಬಡ್ಡಿ ಸೇರಿದಂತೆ 30 ಕೋಟಿ ರೂ.ಗೆ ತಲುಪಿದೆ. ಅದೇ ಹಣಕ್ಕಾಗಿ ವರ್ತೂರು ಪ್ರಕಾಶ್ ಅಪಹರಣ ನಡೆದಿತ್ತು ಎಂದು ಹೇಳಲಾಗುತ್ತಿದೆ.
ಹೌದು. ವರ್ತೂರ್ ಪ್ರಕಾಶ್ ಮಾಜಿ ಸಚವರಾಗಿದ್ದಾರೆ. ಅಷ್ಟೇ ಅಲ್ಲದೇ ಹಲವು ರಾಜಕೀಯ ನಾಯಕರಿಗೆ ಪರಿಚಯ ಹೊಂದಿದ್ದಾರೆ. ಸಾಧಾರಣವಾಗಿ ಹೊರ ಹೋದ ವ್ಯಕ್ತಿ ಒಂದು ದಿನ ಮನೆಗೆ ಬಾರದೇ ಇದ್ದರೂ ಕುಟುಂಬದ ಸದಸ್ಯರು ಆತನನ್ನು ಹುಡುಕಲು ಆರಂಭಿಸಿ ಕೊನೆಗೆ ನಾಪತ್ತೆ ದೂರನ್ನು ದಾಖಲಿಸುತ್ತಾರೆ. ಹೀಗಿರುವಾಗ ಮೂರು ದಿನ ಕಿಡ್ನಾಪ್ ಆಗಿದ್ದರೂ ಮನೆಯವರು ದೂರನ್ನು ಯಾಕೆ ದಾಖಲಿಸಿಲ್ಲ ಎಂಬ ಗಂಭೀರವಾದ ಪ್ರಶ್ನೆ ಎದ್ದಿದೆ.
ದೂರು ತಡ ಯಾಕೆ?
ಅಪಹರಣಕಾರರು ಕಾರಿನಿಂದ ಇಳಿಸಿದ ಬಳಿಕ ಅಪರಿಚಿತ ಕಾರನ್ನು ಅಡ್ಡ ಹಾಕಿ ಕೆ.ಆರ್ ಪುರಂನಲ್ಲಿರುವ ಸಾಯಿ ಆಸ್ಪತ್ರೆವರೆಗೆ ಡ್ರಾಪ್ ಪಡೆದಿದ್ದೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಮಂಗಳವಾರ ಬೆಳ್ಳಂದೂರು ಸ್ಮಶಾನದ ಬಳಿ ನನ್ನ ಕಾರು ಪತ್ತೆಯಾಗಿದೆ. ಗಾಯಗೊಂಡಿದ್ದ ಕಾರಣ ಈಗ ತಡವಾಗಿ ದೂರು ನೀಡುತ್ತಿದ್ದೇನೆ ಎಂದು ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.
ಯಾವ ದಿನ ಏನಾಯ್ತು?
ನವೆಂಬರ್ 25:
ಕೋಲಾರದ ಬೆಗ್ಲಿಹೊಸಹಳ್ಳಿ ಫಾರಂಹೌಸ್‍ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಸಂಜೆ 7 ಗಂಟೆಗೆ ಅಪಹರಣ ನಡೆದಿದೆ. ಎರಡು ಕಾಡುಗಳಲ್ಲಿ ಬಂದಿದ್ದ 8 ಜನರ ತಂಡ ಲಾಂಗ್ ತೋರಿಸಿ ಕಾರು ಅಡ್ಡಗಟ್ಟಿ ವರ್ತೂರ್ ಪ್ರಕಾಶ್, ಚಾಲಕನ ಅಪಹರಣ ಮಾಡಿದ್ದಾರೆ. ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಹಲ್ಲೆ ನಡೆದುಕಣ್ಣಿಗೆ ಪಟ್ಟಿ ಕಟ್ಟಿ ರಹಸ್ಯ ಸ್ಥಳಕ್ಕೆ ಕರೆದೊಯ್ದು 30 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.
ನವೆಂಬರ್ 26:
ಅಪಹರಣಕಾರರ ಹಿಂಸೆ ತಾಳಲಾರದೇ ನಯಾಜ್ ಎಂಬಾತನ ಮೂಲಕ 48 ಲಕ್ಷ ಹಣ ವರ್ತೂರ್ ತರಿಸಿಕೊಂಡಿದ್ದಾರೆ. ಕೋಲಾರದ ಕಾಫಿಡೇ ಶಾಪ್ ಬಳಿ ನಯಾಜ್‍ನಿಂದ 48 ಲಕ್ಷ ರೂ. ಹಸ್ತಾಂತರವಾಗಿದೆ. ಈ ವೇಳೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು ಚಿತ್ರಹಿಂಸೆ ನೀಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ.
ನವೆಂಬರ್ 27:
ವರ್ತೂರು ಪ್ರಕಾಶ್ ಕೊಟ್ಟ ದೂರಿನಲ್ಲಿ ಈ ದಿನದ ಬಗ್ಗೆ ಉಲ್ಲೇಖ ಇಲ್ಲ
ನವೆಂಬರ್ 28:
ಮುಂಜಾನೆಯವರೆಗೂ ಚಿತ್ರಹಿಂಸೆ ನೀಡಿ ಹಣ ಇಲ್ಲ ಎಂದಾಗ ಚಾಲಕನ ತಲೆಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಮಧ್ಯರಾತ್ರಿ 1 ಗಂಟೆಗೆ ಕಾರು ಚಾಲಕ ಮೂರ್ಛೆ ತಪ್ಪಿಬಿದ್ದಿದ್ದ. ಸತ್ತು ಹೋಗಿದ್ದಾನೆ ಭಾವಿಸಿ ಸ್ವಲ್ಪ ದೂರದಲ್ಲಿ ಅಪಹರಣಕಾರರಿಂದ ಮದ್ಯಪಾನ ಪಾರ್ಟಿ ಮಾಡಿದ್ದಾರೆ. ಆದರೆ ಪ್ರಜ್ಞೆ ಬಂದ ಬಳಿಕ ಅಪಹರಣಕಾರರಿಂದ ಕಾರು ಚಾಲಕ ತಪ್ಪಿಸಿಕೊಂಡಿದ್ದಾನೆ. ಬಳಿಕ ವರ್ತೂರು ಪ್ರಕಾಶ್ ಅವರನ್ನು ಹೊಸಕೋಟೆಯ ಶಿವನಾಪುರ ಬಳಿ ಕಾರಿನಿಂದ ಇಳಿಸಿದ ಅಪಹರಣಕಾರರು ದೂರು ನೀಡಿದರೆ ನಿನ್ನ ಮಕ್ಕಳು ಕೊಲೆ ಆಗ್ತಾರೆ ಎಂದು ಧಮ್ಕಿ ಹಾಕಿ ಪರಾರಿಯಾಗಿದ್ದಾರೆ.