ಮೈಸೂರು: ಅಧಿಕಾರಿಗಳನ್ನು ವರ್ಗಾವಣೆ ಮಾಡಿಸೋದು ತಾಕತ್ ಅನ್ನೋದಾದದ್ರೆ ನನಗೆ ಆ ತಾಕತ್ ಬೇಡ. ಒಬ್ಬ ಸಂಸದನಾಗಿ ಕೆಲಸದಲ್ಲಿ ನನ್ನ ತಾಕತ್ತು ತೋರಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
Advertisement
ಜಿಲ್ಲಾಧಿಕಾರಿ ಅಥವಾ ಇನ್ನಾವುದೋ ಅಧಿಕಾರಿಯನ್ನ ವರ್ಗಾವಣೆ ಮಾಡಿಸೋದು ರಾಜಕಾರಣಿಗಳಿಗೆ ಕಾಮನ್. ನನ್ನ ದೃಷ್ಟಿಯಲ್ಲಿ ಅದು ಅತ್ಯಂತ ಸಣ್ಣ ಕೆಲಸ. ಅಂತಹ ಸಣ್ಣ ಕೆಲಸವನ್ನ ನಾನು ಮಾಡೋದಿಲ್ಲ. ಸರ್ಕಾರ ಕೊಟ್ಟ ಅಧಿಕಾರಿಗಳ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಚಾಮರಾಜನಗರ ಘಟನೆಯಿಂದ ಮೈಸೂರು ಡಿಸಿಯನ್ನ ಕಟಕಟೆಗೆ ನಿಲ್ಲಿಸಿದ್ರು. ಆವಾಗೆಲ್ಲಾ ಇವರು ಎಲ್ಲಿ ಹೋಗಿದ್ರೂ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಆಗ ಮೈಸೂರು ಡಿಸಿ ಪರವಾಗಿ ಧ್ವನಿ ಎತ್ತಿದ್ದು ನಾನೇ. ನಾನು ಈಗ ಹೇಳಿರೋದು, ಗ್ರಾಮೀಣಾ ಭಾಗದಲ್ಲಿ ಕೊರೊನಾ ಹೆಚ್ಚಾಗಿದೆ. ಜನ ಕಷ್ಟದಲ್ಲಿದ್ದಾರೆ, ಹಳ್ಳಿಗಳಿಗೆ ಹೋಗಿ ಅಂದೆ. ಹಳ್ಳಿಗಳಿಗೆ ಹೋಗಿ ಅಂತಾ ಡಿಸಿಗೆ ಹೇಳಿದ್ದೇ ತಪ್ಪಾ ಎಂದು ಪ್ರಶ್ನೆ ಮಾಡಿದರು.
Advertisement
Advertisement
ನನ್ನನ್ನು ಬೈಯುವ ಹಕ್ಕು ಅವರಿಗಿದೆ: ಮಾಜಿ ಸಚಿವರ ಸಾ.ರಾ.ಮಹೇಶ್ ಅವರನ್ನ ಹೊಗಳಿದ್ದು ಜಿ.ಟಿ.ದೇವೇಗೌಡರಿಗೆ ಇಷ್ಟವಾಗಿಲ್ಲ ಅನ್ನಿಸುತ್ತೆ. ಹೀಗಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿಟಿ ದೇವೇಗೌಡರು ನನಗೆ ತಂದೆ ಇದ್ದಂತೆ. ರಾಜಕೀಯದಲ್ಲಿ ನನ್ನನ್ನು ಬೈಯುವ ಹಕ್ಕು ಜಿ.ಟಿ ದೇವೇಗೌಡರಿಗಿದೆ. ಅವರು ಬೈಯುವುದನ್ನ ನಾನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ ಎಂದರು.
Advertisement
ಕೆ.ಆರ್ ನಗರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸಾರಾ ಮಹೇಶ್ ಜಿಲ್ಲೆಗೆ ಮೇಲ್ಪಂಕ್ತಿಯಾಗುವಂತೆ ಕೆಲಸ ಮಾಡಿದ್ದಾರೆ ಅಂತ ಹೇಳಿದ್ದು ನಿಜ. ಇದರಲ್ಲಿ ಯಾರನ್ನು ಹೊಗಳುವ, ತೆಗಳುವು ಉದ್ದೇಶವಿಲ್ಲ. ಇದನ್ನ ಅಪಾರ್ಥ ಮಾಡಿಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಟಿಡಿ ಹೇಳಿದ್ದೇನು?: ನೀವು ಪವರ್ ಫುಲ್ ಸಂಸದ. ಪಿಎಂ, ಸಿಎಂ ನೀವು ಹೇಳಿದಂತೆ ಕೇಳುತ್ತಾರೆ. ತಾಕತ್ತಿದ್ದರೆ ಡಿಸಿಯನ್ನು ವರ್ಗಾವಣೆ ಮಾಡಿ ತೋರಿಸಿ. ಇದನ್ನು ಬಿಟ್ಟು ಪೇಪರ್ ಸ್ಟೇಟ್‍ಮೆಂಟ್ ಕೊಟ್ಟು ಯಾಕೆ ಗೊಂದಲ ಮೂಡಿಸುತ್ತೀರಿ. ಜನರು ಮೈಸೂರಿನ ಬಗ್ಗೆ ಆಡಿಕೊಂಡು ನಗುತ್ತಿದ್ದಾರೆ. ನಿಮ್ಮ ಹೇಳಿಕೆ, ಆರೋಪಗಳ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ. ನಿಮ್ಮ ಹೇಳಿಕೆಗಳು ಜನರಲ್ಲಿ ಅನುಮಾನ ಸೃಷ್ಟಿಸಿವೆ ಎಂದು ಜಿ.ಟಿ.ದೇವೇಗೌಡರು ಹೇಳಿದ್ದರು. ಇದನ್ನೂ ಓದಿ: ತಾಕತ್ ಇದ್ದರೆ ಮೈಸೂರು ಡಿಸಿಯನ್ನು ವರ್ಗಾವಣೆ ಮಾಡಿಸಲಿ- ಪ್ರತಾಪ್ ಸಿಂಹಗೆ ಜಿಟಿಡಿ ಸವಾಲು
ಅಧಿಕಾರಿಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡಬೇಡಿ. ಜಿಲ್ಲೆಯ ಶಾಸಕರು ನಿಮಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಂತ ಹಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಸಂಸದರಾಗಿ ನೀವೆಷ್ಟು ಸ್ವಂತ ಹಣ ಖರ್ಚು ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ವ್ಯವಸ್ಥೆಯ ವೈಫಲ್ಯತೆ ಬಗ್ಗೆ ವಿರೋಧ ಪಕ್ಷದವರು ಮಾತನಾಡಬೇಕು, ಆಡಳಿತ ಪಕ್ಷದವರಲ್ಲ ಎಂದರು.