ಮೈಸೂರು: ಜಿಲ್ಲಾಧಿಕಾರಿ ಸ್ಥಾನದಿಂದ ರೋಹಿಣಿ ಸಿಂಧೂರಿ ವರ್ಗಾವಣೆ ಆಗಲು ಭೂ ಅಕ್ರಮದ ತನಿಖೆಗೆ ಕೈ ಹಾಕಿದ್ದೇ ಕಾರಣ ಎಂಬ ಮಾತು ದಟ್ಟವಾಗಿ ಹಬ್ಬಿರುವ ಸಂದರ್ಭದಲ್ಲೇ ರೋಹಿಣಿ ಸಿಂಧೂರಿ ಅವರು ಜೂನ್ ಮೊದಲ ವಾರದಲ್ಲಿ ಮಾಡಿರುವ ಕೆಲಸ, ಆದೇಶಗಳ ಕುರಿತು ಮಾಹಿತಿ ಹೊರ ಬಿದ್ದಿದೆ.
ನಗರದ ಲಿಂಗಾಬುಧಿ ಕೆರೆಯ ಅಂಗಳದ ಸಮೀಪ ಪ್ರಭಾವಿ ವ್ಯಕ್ತಿಯೊಬ್ಬರು ರೆಸಾರ್ಟ್ ಆರಂಭಿಸುವ ಪ್ರಯತ್ನ ತಡೆಯುವ ಸಂಬಂಧದ ಆದೇಶ, ಮೈಸೂರು ತಾಲೂಕು ಕಸಬಾ ಹೋಬಳಿಯ ಗೋಮಾಳ ಜಮೀನು ಸಂಬಂಧದ ಸರ್ವೇ ಕಾರ್ಯದ ಆದೇಶ, ಲಿಂಗಾಬುಧಿ ಗ್ರಾಮದ ಸರ್ವೇ ನಂಬರ್ 124/2 ರಲ್ಲಿ 1.39 ಏಕರೆಯ ಭೂ ಪರಿವರ್ತನೆ ರದ್ದು ಕುರಿತು ಆದೇಶ ಹೊರಡಿಸಿದ್ದರು. ಇದನ್ನೂ ಓದಿ: ಡಿಸಿ ಮನೆ ಕರೆಂಟ್ ಬಿಲ್ ತಿಂಗಳಿಗೆ 50 ಸಾವಿರ ರೂ.: ಸಾರಾ ಮಹೇಶ್ ಆರೋಪ
ಅಲ್ಲದೆ ಕೇರ್ಗಳಿ ಗ್ರಾಮದ ಸರ್ವೇ ನಂಬರ್ 155ರ 50 ಏಕರೆಗೂ ಹೆಚ್ಚಿನ ಜಮೀನಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿರುವ ಪರಿಹಾರ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ತನಿಖೆ ಮಾಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಉಪವಿಭಾಗಾಧಿಕಾರಿಗಳಿಗೆ ಆದೇಶ ನೀಡಿದ್ದರು. ಈ ಆದೇಶವಾದ ಎರಡೇ ದಿನದಲ್ಲಿ ರೋಹಿಣಿ ಸಿಂಧೂರಿ ವರ್ಗವಾಗಿದೆ. ಇದನ್ನೂ ಓದಿ: ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ
ಈಗ ಈ ಆದೇಶ ಪ್ರತಿಗಳು ಮಾಧ್ಯಮಗಳಿಗೆ ತಲುಪಿದ್ದು, ರೋಹಿಣಿ ಸಿಂಧೂರಿ ವರ್ಗಾವಣೆಗೂ ಈ ಆದೇಶಗಳಿಗೂ ಸಂಬಂಧ ಇದೆಯೇ ಎಂಬ ಅನುಮಾನ ಮೂಡುವಂತೆ ಮಾಡಿದೆ. ಆದೇಶದಲ್ಲಿ ಎಲ್ಲೂ ಪ್ರಭಾವಿ ವ್ಯಕ್ತಿಯ ಹೆಸರಿಲ್ಲ. ಇದನ್ನೂ ಓದಿ: ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ – ರೋಹಿಣಿ ಸಿಂಧೂರಿ