ಶಿವಮೊಗ್ಗ : ಪತಿ ಹಾಗೂ ಪತಿಯ ಕುಟುಂಬಸ್ಥರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯನ್ನು ಸವಿತಾ (31) ಎಂದು ಗುರುತಿಸಲಾಗಿದೆ. ಕಳೆದ 11 ವರ್ಷದ ಹಿಂದೆ ಶಿವಮೊಗ್ಗ ಸಮೀಪದ ಜಾವಳ್ಳಿಯ ಸವಿತಾಳಿಗೆ ಹೇಮಂತ್ ಜೊತೆ ವಿವಾಹವಾಗಿತ್ತು. ಸವಿತಾಳ ಪತಿ ಹೇಮಂತ್ ಆಟೋ ಓಡಿಸುತ್ತಿದ್ದು, ಅದರಿಂದ ಬರುವ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದರು.
ಆಟೋ ಓಡಿಸಿ ಬರುತ್ತಿದ್ದ ಸಂಪಾದನೆ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತಿ ಹೇಮಂತ್ ಪತ್ನಿ ಸವಿತಾಳಿಗೆ ಆಗಾಗ ಕಿರುಕುಳ ನೀಡುತ್ತಿದ್ದ. ಪತಿಯ ಕಿರುಕುಳ ತಾಳಲಾರದೇ ಸವಿತಾ ತನ್ನ ಹೆತ್ತವರಿಂದ ಹಲವು ಬಾರಿ ಹಣವನ್ನು ತಂದು ಕೊಟ್ಟಿದ್ದಳು. ಆದರೂ ಕೂಡ ಆರೋಪಿ ಪತಿ ಹೇಮಂತ್ ಹಾಗೂ ಆತನ ಕುಟುಂಬಸ್ಥರು ಮೃತ ಸವಿತಾಳಿಗೆ ಕಿರುಕುಳ ನೀಡುತ್ತಿದ್ದರು. ಕಿರುಕುಳ ತಾಳಲಾರದೇ ಸವಿತಾ ನೇಣು ಬಿಗಿದುಕೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸವಿತಾ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಆತ್ಮಹತ್ಯೆ ಕುರಿತು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.