– ವರನ ಕಡೆಯಿಂದ ವಧು ಕುಟುಂಬಕ್ಕೆ 5 ಲಕ್ಷ ಪರಿಹಾರ
ಮೈಸೂರು: ನಿಶ್ಚಿತಾರ್ಥವಾದ ಬಳಿಕ ವರನಿಗೆ ವಧು ಕೈ ಕೊಡುವುದು ಕೇಳಿದ್ದೇವೆ. ಈ ಮೂಲಕ ಮದುವೆ ಮುರಿದು ಬಿದ್ದ ಅನೇಕ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದಿವೆ. ಆದರೆ ಮೈಸೂರಿನಲ್ಲಿ ಮಾತ್ರ ವರನೇ ವಧುವಿಗೆ ಕೈ ಕೊಟ್ಟ ಅಚ್ಚರಿಯ ಘಟನೆಯೊಂದು ನಡೆದಿದೆ.
ಹೌದು. ಮೈಸೂರಿನ ಕೆ.ಆರ್.ಮೊಹಲ್ಲದಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ಸುಣ್ಣದಕೇರಿಯ ಉಮೇಶ್ ಪರಾರಿಯಾದ ವರ. ಇಂದು ಸಿಂಚನಾ ಹಾಗೂ ಉಮೇಶ್ ಮದುವೆ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ನಿಶ್ವಯವಾಗಿದ್ದ ವಧು ಬಿಟ್ಟು ವರ ತನ್ನ ಹಳೆಯ ಪ್ರೇಯಸಿಯೊಂದಿಗೆ ಪರಾರಿಯಾಗಿದ್ದಾನೆ.
ಮದುವೆಗೆ ಒಂದು ದಿನ ಇರುವಾಗಲೇ ಮಾಜಿ ಲವ್ವರ್ ನೊಂದಿಗೆ ಎಸ್ಕೇಪ್ ಆಗಿರುವ ವರ, ಆಕೆಯ ಜೊತೆ ಮದುವೆಯಾಗಿ ತನ್ನ ಮನೆಯವರಿಗೆ ತಿಳಿಸಿದ್ದಾನೆ. ಇತ್ತ ಇಂದು ನಡೆಯುವ ಮದುವೆಗೆ ಕುಟುಂಬಸ್ಥರು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇದೀಗ ವರನ ಪರಾರಿ ಸುದ್ದಿಯಿಂದ ಕಂಗಾಲಾಗಿದ್ದಾರೆ.
ಸದ್ಯ ವರ ಉಮೇಶ್ ಕುಟುಂಬಸ್ಥರು ವಧು ಕುಟುಂಬಕ್ಕೆ 5 ಲಕ್ಷ ಹಣ ಕೊಡುವುದಾಗಿ ಹೇಳುತ್ತಿದ್ದಾರೆ. ವಧುವಿನ ಪೋಷಕರು ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.