ಮೈಸೂರು: ಯುವಕನೊಬ್ಬ ತನ್ನ ಕುಚುಕು ಗೆಳೆಯನ ಕತ್ತು ಕೊಯ್ದು ಪರಾರಿಯಾಗಲು ಯತ್ನಿಸಿದ ಘಟನೆ ನಂಜನಗೂಡಿನ ತಾಂಡವಪುರದಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದವನನ್ನು ರೋಹನ್ ಎಂದು ಗುರುತಿಸಲಾಗಿದೆ. ಈತ ಗೆಳೆಯ ದಿಲ್ ಶಾದ್ ನಿಂದ ಮಾರಾಣಾಂತಿಕ ಹಲ್ಲೆಗೊಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ರೋಹನ್ ಹಾಗೂ ದಿಲ್ ಶಾದ್ 5ನೇ ತರಗತಿಯಿಂದ ಗೆಳೆಯರು. ಸದ್ಯ ರೋಹನ್ ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದರೆ, ದಿಲ್ ಶಾದ್ ಮೈಸೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾನೆ.
ನಿನ್ನೆ ರಾತ್ರಿ ಇಬ್ಬರೂ ರೋಹನ್ ಮನೆಯಲ್ಲಿ ಲ್ಯಾಪ್ ಟಾಪ್ ನೋಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ದಿಲ್ ಶಾದ್, ರಾಹುಲ್ ಕುತ್ತಿಗೆಯನ್ನ ಚಾಕುವಿನಿಂದ ಕೊಯ್ದಿದ್ದಾನೆ. ಗೆಳೆಯನನ್ನ ಇರಿದು ಬಳಿಕ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.