ಲ್ಯಾಂಡ್ ಆಗುವ ಒಂದು ನಿಮಿಷ ಮೊದಲೇ ವಿಮಾನ ಪತನ

Public TV
2 Min Read
plane Karachi 1

– 10 ವರ್ಷದಲ್ಲಿ ಪಾಕ್‍ನಲ್ಲೇ 6 ದೊಡ್ಡ ವಿಮಾನ ದುರಂತ

ಇಸ್ಲಾಮಾಬಾದ್: ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌‌ಲೈನ್ಸ್ (ಪಿಐಎ)ನ ಪ್ರಯಾಣಿಕರ ವಿಮಾನವು ಕರಾಚಿಯ ವಸತಿ ಪ್ರದೇಶದಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆ.

ಈ ವಿಮಾನ ಲಾಹೋರ್‌ನಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ಒಂದು ನಿಮಿಷ ಮೊದಲೇ ವಿಮಾನ ದುರ್ಘಟನೆ ನಡೆದಿದೆ. ವಿಮಾನದಲ್ಲಿ 51 ಪುರುಷರು, 31 ಮಹಿಳೆಯರು, 9 ಮಕ್ಕಳು ಸೇರಿ 91 ಪ್ರಯಾಣಿಕರು ಹಾಗೂ 7 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.

ಇದುವರೆಗೆ 5 ವರ್ಷದ ಮಗು, ಹಿರಿಯ ಪತ್ರಕರ್ತ ಅನ್ಸಾರಿ ನಖ್ವಿ ಸೇರಿ 13 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಬ್ಯಾಂಕ್ ಆಫ್ ಪಂಜಾಬ್ ಅಧ್ಯಕ್ಷ ಜಾಫರ್ ಮಸೂದ್ ಅವರು ಸುರಕ್ಷಿತವಾಗಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಈಗ ನಮ್ಮ ಆದ್ಯತೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಎಂದು ಹೇಳಿದ್ದಾರೆ.

ವಿಮಾನವು ಕರಾಚಿಯ ಮಾಡೆಲ್ ಕಾಲೋನಿಯ ಜಿನ್ನಾ ಗಾರ್ಡನ್ ಪ್ರದೇಶದಲ್ಲಿ ಬಿದ್ದಿದೆ. ಪರಿಣಾಮ ಅಲ್ಲಿನ ಅನೇಕ ಮನೆಗಳಿಗೆ ಬೆಂಕಿ ಹೊತ್ತಿ ಉರಿದಿದೆ. ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಪೈಲಟ್ ಎಂಜಿನ್ ವೈಫಲ್ಯದ ಬಗ್ಗೆ ವಾಯು ಸಂಚಾರ ನಿಯಂತ್ರಕಕ್ಕೆ ಮಾಹಿತಿ ನೀಡಿದ್ದರು. ಆದರೆ ವಿಮಾನ ಇನ್ನೇನು ಲ್ಯಾಂಡ್ ಆಗುವ ಹಂತದಲ್ಲಿ ಇದ್ದಾಗಲೇ ಸಂಪರ್ಕ ಕಳೆದುಕೊಂಡಿತ್ತು.

ಅಪಘಾತಕ್ಕೀಡಾದ ವಿಮಾನ ಏರ್‌ಬಸ್-320ವು 15 ವರ್ಷ ಹಳೆಯದಾಗಿತ್ತು. ಪೈಲಟ್‍ನ ಹೆಸರು ಸಜ್ಜಾದ್ ಗುಲ್ ಎಂದು ವರದಿಯಾಗಿದೆ. ವಿಮಾನವನ್ನು ವಸತಿ ಪ್ರದೇಶವನ್ನು ದಾಟಿಸಲು ಪೈಲಟ್ ಪ್ರಯತ್ನಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದರಿಂದಾಗಿ ಕಡಿಮೆ ಪ್ರಮಾಣದಲ್ಲಿ ಮನೆಗಳು ಹಾನಿಗೊಳಗಾಗಿವೆ. ವಿಮಾನದಲ್ಲಿ ಸಹ ಪೈಲಟ್ ಮತ್ತು ಮೂರು ಏರ್ ಹೊಸ್ಟೆರ್ ಗಳಿದ್ದರು ಎಂದು ತಿಳಿದು ಬಂದಿದೆ.

6 ದೊಡ್ಡ ವಿಮಾನ ದುರಂತಗಳು:
1) 2010ರ ಜುಲೈ 28: ಕರಾಚಿಯಿಂದ ಹಾರಾಟ ನಡೆಸಿದ್ದ ಖಾಸಗಿ ವಿಮಾನಯಾನ ಸಂಸ್ಥೆ ಏರ್‍ಬಸ್‍ನ ವಿಮಾನ ಏರ್‌ಬಸ್-321 ಇಸ್ಲಾಮಾಬಾದ್ ಹೊರಗಿನ ಬೆಟ್ಟಗಳಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಎಲ್ಲಾ 152 ಜನರು ಸಾವನ್ನಪ್ಪಿದ್ದರು.
2) 2010ರ ನವೆಂಬರ್ 5: ಕರಾಚಿಯಲ್ಲಿ ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ, ಅವಳಿ ಎಂಜಿನ್ ವಿಮಾನ ಅಪಘಾತಕ್ಕೀಡಾಗಿತ್ತು. ಇದು ಇಟಾಲಿಯನ್ ತೈಲ ಕಂಪನಿಯ ಸಿಬ್ಬಂದಿಯನ್ನು ಹೊತ್ತು ಪ್ರಯಾಣ ಬೆಳೆಸಿತ್ತು. ಈ ಅಪಘಾತದಲ್ಲಿ 21 ಜನರು ಮೃತಪಟ್ಟಿದ್ದರು.

3) 2010ರ ನವೆಂಬರ್ 28: ಜಾರ್ಜಿಯಾದ ವಿಮಾನಯಾನ ಸನ್‍ವೇಯ ಅಲುಶಿನಿಲ್-76 ಸರಕು ವಿಮಾನವು ಕರಾಚಿಯಿಂದ ಹಾರಾಟ ನಡೆಸಿದ ನಂತರ ಅಪಘಾತಕ್ಕೀಡಾಗಿತ್ತು. ಇದರಲ್ಲಿ 12 ಜನರ ಬಲಿಯಾಗಿದ್ದರು.
4) 2012ರ ಏಪ್ರಿಲ್ 20: ಇಸ್ಲಾಮಾಬಾದ್ ನಗರ ದಾಟಿದ ಸ್ವಲ್ಪ ದೂರದಲ್ಲೇ ಭೋಜ್ ಏರ್‌ಬಸ್-737 ವಿಮಾನ ಪತನಗೊಂಡಿತ್ತು. ಈ ವೇಳೆ ಸಿಬ್ಬಂದಿ ಸೇರಿದಂತೆ 128 ಪ್ರಯಾಣಿಕರು ಸಾವನ್ನಪ್ಪಿದ್ದರು.
5) 2015ರ ಮೇ 8: ಗಿಲ್ಗಿಟ್‍ನಲ್ಲಿ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಈ ಸಮಯದಲ್ಲಿ 8 ಜನರು ಪ್ರಾಣಬಿಟ್ಟಿದ್ದರು. ಇದರಲ್ಲಿ ನಾರ್ವೆ, ಫಿಲಿಪೈನ್ಸ್, ಇಂಡೋನೇಷ್ಯಾದ ರಾಯಭಾರಿಗಳು ಮತ್ತು ಮಲೇಷ್ಯಾ ಮತ್ತು ಇಂಡೋನೇಷ್ಯಾದ ರಾಯಭಾರಿಗಳ ಪತ್ನಿಯರು ಕೂಡ ಇದ್ದರು.
6) 2016ರ ಡಿಸೆಂಬರ್ 7: ಚಿತ್ರಾಲ್‍ನಿಂದ ಇಸ್ಲಾಮಾಬಾದ್‍ಗೆ ಪ್ರಾಯಾಣಿಸುತ್ತಿದ್ದ ಪಿಐನ ಎಟಿಆರ್-42 ವಿಮಾನ ಪತನಗೊಂಡಿತ್ತು. ಅಪಘಾತದಲ್ಲಿ ಸಿಬ್ಬಂದಿ ಸೇರಿದಂತೆ 48 ಪ್ರಯಾಣಿಕರು ಸಾವನ್ನಪ್ಪಿದ್ದರು.

Share This Article
Leave a Comment

Leave a Reply

Your email address will not be published. Required fields are marked *