– ಬೆಂಕಿಗೆ ಸುಟ್ಟು ಕರಕಲಾದ ವಿಮಾನ
ಕೈವ್: ದೇಶದ ಪೂರ್ವದ ಖಾರ್ಕಿವ್ ಬಳಿ ಉಕ್ರೇನಿಯನ್ ವಾಯುಪಡೆಯ ವಿಮಾನವು ಪತನವಾಗಿ ಮಿಲಿಟರಿ ಸಿಬ್ಬಂದಿ ಸೇರಿದಂತೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಇದು ಒಂದು ಆಘಾತ. ವಿಮಾನ ಪತನದಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆ ದಾಖಲಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಉಪ ಆಂತರಿಕ ಸಚಿವ ತಿಳಿಸಿದರು.
ಪತನವಾದ ಸಾರಿಗೆ ವಿಮಾನದಲ್ಲಿ ಒಟ್ಟು 28 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ 21 ಮಿಲಿಟರಿ ವಿದ್ಯಾರ್ಥಿಗಳು ಮತ್ತು ಏಳು ಸಿಬ್ಬಂದಿ ಇದ್ದರು. ಖಾರ್ಕಿವ್ ರಾಷ್ಟ್ರೀಯ ವಾಯುಪಡೆಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವಾಯುಪಡೆ ತಿಳಿಸಿದೆ.
ಉಕ್ರೇನ್ ರಾಜಧಾನಿ ಕೈವ್‍ನಿಂದ ಸುಮಾರು 400 ಕಿ.ಮೀ. ದೂರವಿರುವ ಚುಹುಯಿವ್ ವಿಮಾಣ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ಈ ಅವಘಡ ಸಂಭವಿಸಿದೆ. ಆಂಟೊನೊವ್ -26 ಸಾರಿಗೆ ವಿಮಾನವು ಲ್ಯಾಂಡಿಂಗ್ ಆಗುವಾಗ ಪತನವಾಗಿದೆ. ಪರಿಣಾಮ ವಿಮಾನ ಸ್ಫೋಟಿಸಿ ಬೆಂಕಿ ಹೊತ್ತಿಕೊಂಡಿದೆ. ಪತನದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, 22 ಮಂದಿ ಸಜೀವ ದಹನರಾಗಿದ್ದಾರೆ ಎಂದು ತುರ್ತು ಸೇವೆಗಳು ತಿಳಿಸಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ರಕ್ಷಣಾ ಪಡೆ, ಅಗ್ನಿಶಾಮಕ ದಳ ದೌಡಾಯಿಸಿದ್ದು, ಒಂದು ಗಂಟೆಯ ನಂತರ ಬೆಂಕಿಯನ್ನು ನಂದಿಸಲಾಗಿದೆ. ವಿಮಾನ ದುರಂತಕ್ಕೆ ಕಾರಣಗಳನ್ನು ತನಿಖೆ ಮಾಡಲು ತುರ್ತಾಗಿ ಆಯೋಗವನ್ನು ರಚಿಸಲಾಗಿದೆ. ಆದರೆ ಇದುವರೆಗೂ ವಿಮಾನ ಪತನಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ.
22 die in Ukraine military plane crash pic.twitter.com/lpZEQE1S5j
— Comasur (@comasur999) September 25, 2020