– ಸೋತ ಬಳಿಕ ಸಂಬಂಧವನ್ನೇ ಕಡಿದುಕೊಂಡಳು
– ತಂದೆ ಎಂದು ಭಾವಿಸಲು ಹಿಂಜರಿಕೆ
– ತನ್ನ ಸಂತೋಷಕ್ಕಾಗಿ ತಂದೆ ಸೋಲಬೇಕಿತ್ತಂತೆ
ಭೋಪಾಲ್: ಒಂದು ಸಣ್ಣ ಗೇಮ್‍ಗಾಗಿ ಅನಾಹುತಗಳು ನಡೆದಿರುವುದನ್ನು ಕೇಳಿದ್ದೇವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಲುಡೊ ಆಡುವಾಗ ತಂದೆ ಮೋಸ ಮಾಡಿದ್ದಾನೆ ಎಂದು 24 ವರ್ಷದ ಯುವತಿ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಲುಡೊ ಗೇಮ್ ಆಡುವಾಗ ತಂದೆ ಮೋಸ ಮಾಡಿದ್ದಕ್ಕೆ ಅವರ ಮೇಲಿದ್ದ ಗೌರವವನ್ನೇ ಯುವತಿ ಕಳೆದುಕೊಂಡಿದ್ದು, ದ್ವೇಷ ಮಾಡಲು ಪ್ರಾರಂಭಿಸಿದ್ದಾಳೆ. ಅವರೊಂದಿಗಿನ ಎಲ್ಲ ಬಂಧಗಳನ್ನು ಕಡಿದುಕೊಂಡಿದ್ದಾಳೆ. ತಂದೆ ತನ್ನ ಮಗಳನ್ನು ಸೋಲಿಸಿದ್ದು, ಆಟದ ಬಳಿಕ ಮಗಳು ತಂದೆ ಎಂದು ಸಂಬೋಧಿಸುವುದನ್ನೇ ಬಿಟ್ಟಿದ್ದಾಳಂತೆ. ಇದಕ್ಕೆ ಕಾರಣ ಅವಳಿಟ್ಟ ನಂಬಿಕೆ. ಹೌದು ಆಕೆ ತಂದೆಯ ಮೇಲೆ ಅಪಾರ ಗೌರವನ್ನಿಟ್ಟುಕೊಂಡಿದ್ದು, ಅವರು ಮೋಸ ಮಾಡುವುದನ್ನು ಊಹಿಸಿರಲಿಲ್ಲ. ಆದರೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧವನ್ನೇ ಕಡಿದುಕೊಂಡಿದ್ದಾಳೆ.
ಮಹಿಳೆಯ ಪರಿಸ್ಥಿತಿ ಗಂಭೀರಕ್ಕೆ ತಿರುಗಿದ್ದು, ಘಟನೆ ಬಳಿಕ ನಾಲ್ಕು ಬಾರಿ ಕೌನ್ಸಿಲರ್ ಕಡೆಯಿಂದ ಮನವೊಲಿಸಲು ಯತ್ನಿಸಲಾಗಿದೆ. ಆದರೆ ನಾಲ್ಕು ಬಾರಿಯ ಮಾತುಕತೆಯಲ್ಲಿಯೂ ಯುವತಿ ಒಪ್ಪಿಕೊಂಡಿಲ್ಲ.
ಭೂಪಾಲ್ ಕೌಟುಂಬಿಕ ನ್ಯಾಯಾಲಯದ ಕೌನ್ಸಿಲರ್ ಸರಿತಾ ಅವರು ಈ ಕುರಿತು ಮಾಹಿತಿ ನೀಡಿ, 24 ವರ್ಷದ ಮಹಿಳೆಯ ಕಳೆದ ಕೆಲವು ದಿನಗಳ ಹಿಂದೆ ನನ್ನನ್ನು ಸಂಪರ್ಕಿಸಿದ್ದು, ಕುಟುಂಬಸ್ಥರು ಹಾಗೂ ತಂದೆಯೊಂದಿಗೆ ಲುಡೊ ಆಡುವಾಗ ತಂದೆ ನನ್ನ ಒಂದು ಕಾಯಿಯನ್ನು ಹೊಡೆದ. ನನ್ನ ಜೀವನದಲ್ಲಿ ಎಲ್ಲ ರೀತಿಯ ಸಂತಸವನ್ನು ನೀಡಿದ್ದ ತಂದೆಯೇ ಈ ರೀತಿ ಮಾಡುತ್ತಾನೆ ಎಂದು ನಾನು ಊಹಿಸಿರಲಿಲ್ಲ. ಘಟನೆ ಬಳಿಕ ತನ್ನ ಮತ್ತು ಅವಳ ತಂದೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅವಳು ನಂಬಲು ಪ್ರಾರಂಭಿಸಿದಳು ಎಂದು ಮಾಹಿತಿ ನೀಡಿದ್ದಾರೆ.
ತನ್ನನ್ನು ಸೋಲಿಸಲು ಬಂದ ನಂತರ ನನ್ನ ತಂದೆಯ ಮೇಲಿನ ಗೌರವವನ್ನು ಕಳೆದುಕೊಂಡೆ. ನನ್ನ ಸಂತೋಷಕ್ಕಾಗಿ ತಂದೆ ಆಟದಲ್ಲಿ ಸೋಲಬೇಕಿತ್ತು ಎಂದು ಅವಳು ಭಾವಿಸಿದ್ದಾಳೆ. ನಾವು ಅವಳೊಂದಿಗೆ ನಾಲ್ಕು ಬಾರಿ ಕೌನ್ಸಿಲಿಂಗ್ ಸೆಷನ್‍ಗಳನ್ನು ಮಾಡಿದ್ದೇವೆ. ಇತ್ತೀಚೆಗೆ ಅವಳಲ್ಲಿ ಧನಾತ್ಮಕ ಭಾವನೆ ಮೂಡುತ್ತಿದೆ ಎಂದು ಅವರು ತಿಳಿಸಿದ್ದಾರೆ.