ನವದೆಹಲಿ: ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕಸ್ಟರ್ನ್ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಹಾಡಿ ಹೊಗಳಿದ್ದಾರೆ. ಲೀಡರ್ ಎಂದರೇ ಧೋನಿ ಎಂದು ಹೇಳುವ ಮೂಲಕ ಅವರ ಪ್ರಾಮಾಣಿಕತೆಗೆ ಉದಾಹರಣೆಯೊಂದನ್ನು ನೀಡಿದ್ದಾರೆ.
2008ರಲ್ಲಿ ಟೀಂ ಇಂಡಿಯಾ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಗ್ಯಾರಿ ಕಸ್ಟರ್ನ್, ನಾಯಕ ಧೋನಿರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಧೋನಿ ಕ್ರೀಡಾಂಗಣದಲ್ಲಿ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಾರೆ. ಅಂತೆಯೇ ಮೈದಾನದ ಹೊರಗು ನಿಜವಾದ ಲೀಡರ್ ಆಗಿ ವರ್ತಿಸುತ್ತಾರೆ ಎಂದು ಗ್ಯಾರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ನನ್ನನ್ನು ಹೆಚ್ಚು ಆಕರ್ಷಿಸಿದ ವ್ಯಕ್ತಿಗಳಲ್ಲಿ ಧೋನಿ ಒಬ್ಬರು. ಅವರು ಅತ್ಯುತ್ತಮ ಲೀಡರ್. ಧೋನಿ ಒಮ್ಮೆ ಒಬ್ಬರನ್ನು ನಂಬಿದರೆ ಕೊನೆವರೆಗೂ ಜೊತೆಯಲ್ಲಿ ನಿಲ್ಲುತ್ತಾರೆ. 2011ರ ವಿಶ್ವಕಪ್‍ಗೂ ಮುನ್ನ ಬೆಂಗಳೂರಿನ ಫ್ಲೈಟ್ ಸ್ಕೂಲ್‍ನಿಂದ ಟೀಂ ಇಂಡಿಯಾ ಕ್ರಿಕೆಟ್ ಆಟಗಾರರಿಗೆ ಆಹ್ವಾನ ಲಭಿಸಿತ್ತು. ಭಾರತ ಕ್ರಿಕೆಟಿಗರು ಸೇರಿದಂತೆ ತಂಡದ ಸಿಬ್ಬಂದಿಯೊಂದಿಗೆ ನಾನು ಅಲ್ಲಿಗೆ ತೆರಳಿದ್ದೆ. ಆದರೆ ಸಿಬ್ಬಂದಿಯಲ್ಲಿದ್ದ ನಾವು ಮೂವರು ದಕ್ಷಿಣ ಆಫ್ರಿಕಾ ಪ್ರಜೆಗಳಾಗಿದ ಕಾರಣದಿಂದ ಭದ್ರತೆಯ ನಿಯಮಗಳ ಅನ್ವಯ ಒಳ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಧೋನಿ ಕೂಡ ಅಲ್ಲಿನ ಸಿಬ್ಬಂದಿಗೆ ನಮ್ಮನ್ನು ಒಳ ಪ್ರವೇಶಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಅದು ಸಾಧ್ಯವಾಗದ ಕಾರಣ ಧೋನಿ ಆ ಈವೆಂಟ್ ರದ್ದು ಮಾಡಿ ಹಿಂದಿರುಗಿದ್ದರು’ ಎಂದು ಗ್ಯಾರಿ ತಿಳಿಸಿದ್ದಾರೆ.
2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಧೋನಿ ಪ್ರಮುಖ ವಹಿಸಿದ್ದರು. ಟೂರ್ನಿಯ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಬದಲು ಧೋನಿ ಬ್ಯಾಟಿಂಗ್ ಅರ್ಡರ್ ನಲ್ಲಿ ಉನ್ನತಿ ಪಡೆದು ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆಯಲು ಬ್ಯಾಟಿಂಗ್ ಅರ್ಡರ್ ನಲ್ಲಿ ಮಾಡಿದ ಬದಲಾವಣೆ ಕಾರಣ ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಧೋನಿ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಗೆ ಗ್ಯಾರಿ ಕಸ್ಟರ್ನ್ ಕೂಡ ಸಮ್ಮತಿ ಸೂಚಿಸಿದ್ದರು.