– ಪ್ರಹ್ಲಾದ್ ಜೋಶಿಗೆ ಖುಲಾಯಿಸುತ್ತಾ ಲಕ್..?
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಇದೀಗ ಬಿಎಸ್‍ವೈ ಉತ್ತರಾಧಿಕಾರಿ ಯಾರಾಗಬಹುದು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಬೇರೆ ರಾಜ್ಯಗಳಲ್ಲಿ ಮಾಡಿದಂತೆ ಇಲ್ಲಿಯೂ ಜಾತಿ ಚೌಕಟ್ಟು ಮೀರುತ್ತಾ..? ಅಥವಾ ಪ್ರಯೋಗ ಮಾಡಿದ್ರೆ ಕೈಸುಟ್ಟುಕೊಳ್ಳಬಹುದು ಎಂಬ ಭೀತಿಯಲ್ಲಿ ಲಿಂಗಾಯತ ಸಮುದಾಯದ ನಾಯಕರೊಬ್ಬರಿಗೆ ಹೈಕಮಾಂಡ್ ಮಣೆ ಹಾಕುತ್ತಾ ಎಂಬ ಪ್ರಶ್ನೆ ಎದ್ದಿದೆ. ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಪ್ರಹ್ಲಾದ್ ಜೋಶಿ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಮಹತ್ವದ ಸಭೆ ನಡೆಸಿದ್ರು.
ಸಿಎಂ ರೇಸ್‍ನಲ್ಲಿ ಯಾರಿದ್ದಾರೆ..?
ಅರವಿಂದ್ ಬೆಲ್ಲದ್ ಅವರ ಹೆಸರು ಸಿಎಂ ರೇಸ್ ನಲ್ಲಿ ಮುಂಚೂಣಿಯಲ್ಲಿದೆ. ಯಾಕಂದರೆ ಹೊಸ ಹಾಗೂ ಯುವ ಮುಖ, ಕ್ಲೀನ್ ಹ್ಯಾಂಡ್ ಆಗಿದ್ದಾರೆ. ಮೋದಿ ಪಾಲಿನ ನೀಲಿಗಣ್ಣಿನ ಯುವಕ ಬೆಲ್ಲದ್, ಧಾರವಾಡ ಪಶ್ಚಿಮ ಶಾಸಕನ ಪರ ಆರ್‍ಎಸ್‍ಎಸ್ ಒಲವು ಹೊಂದಿದೆ. ಅಲ್ಲದೆ ಇವರು ಪ್ರಬಲ ಪಂಚಮಸಾಲಿ ಸಮುದಾಯದವರಾಗಿದ್ದಾರೆ. ಮುರುಗೇಶ್ ನಿರಾಣಿ ಕೂಡ ಸಿಎಂ ರೇಸ್ ನಲ್ಲಿ ಕೇಳಿ ಬಂದಿದ್ದು, ಸಚಿವ ಹಾಗೂ ಬೀಳಗಿ ಶಾಸಕರಾಗಿದ್ದು, ಆಡಳಿತದ ಅನುಭವ ಹೊಂದಿದ್ದಾರೆ. ಹೈಕಮಾಂಡ್ ನಂಟು, ಅಮಿತ್ ಶಾ ಬೆಂಬಲವಿದ್ದು, ಪ್ರಬಲ ಪಂಚಮಸಾಲಿ ಸಮುದಾಯದವರಾಗಿದ್ದಾರೆ. ಇದನ್ನೂ ಓದಿ:ಕಣ್ಣೀರ ಹಿಂದಿನ ನೋವೇನು..?, ಆ ನೋವು ಕೊಟ್ಟವರಾರೆಂಬುದನ್ನು ಬಿಎಸ್‍ವೈ ಬಹಿರಂಗಪಡಿಸಲಿ: ಡಿಕೆಶಿ
ಇನ್ನು ಪ್ರಹ್ಲಾದ್ ಜೋಶಿ ಅವರ ಹೆಸರು ಕೂಡ ಸಿಎಂ ರೇಸ್ ನಲ್ಲಿ ಕೇಳಿಬಂದಿದೆ. ಕೇಂದ್ರ ಮಂತ್ರಿ, ಧಾರವಾಡ ಸಂಸದ ಹಾಗೂ ಅನುಭವಿ ರಾಜಕಾರಣಿಯಾಗಿದ್ದು, ಸಂಘದ ಕಟ್ಟಾಳು, ಪಕ್ಷ ನಿಷ್ಠ ಹಾಗೆಯೇ ಮೋದಿ ಆಪ್ತ ಕೂಡ ಹೌದು. ಕ್ಲೀನ್ ಇಮೇಜ್ ಇರುವ ಜೋಶಿ ಅವರು ಚಾಣಾಕ್ಷ ಆಡಳಿತಗಾರರು ಕೂಡ ಆಗಿದ್ದಾರೆ. ಗುಂಪುಗಾರಿಕೆ ಇಲ್ಲ, ಸಂಘಟನಾ ಚತುರರಾಗಿದ್ದಾರೆ. ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡುವ ಮೋದಿ, ಶಾ ಅಚ್ಚರಿಯ ಮುಖವನ್ನು ಸಿಎಂ ಗಾದಿಗೆ ಏರಿಸುವ ಸಾಧ್ಯತೆಗಳು ಕೂಡ ದಟ್ಟವಾಗಿವೆ. ಇದನ್ನೂ ಓದಿ: ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ: ರೇಣುಕಾಚಾರ್ಯ
ಒಟ್ಟಿನಲ್ಲಿ ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳು ಎದ್ದಿತ್ತು. ಇಂದು ಈ ಊಹಾಪೋಹಗಳಿಗೆ ಇಂದು ತೆರೆಬಿದ್ದಿದ್ದು, ತಮ್ಮ ಎರಡು ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಹಾಭಾಷಣ ಮಾಡಿ, ತಾವು ರಾಜೀನಾಮೆ ನೀಡುತ್ತಿರುವುದಾಗಿ ಗದ್ಗದಿತರಾಗಿಯೇ ಘೋಷಣೆ ಮಾಡಿದರು. ಅದರಂತೆ ಮಧ್ಯಾಹ್ನ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಇದನ್ನೂ ಓದಿ: ನಾನು ರಾಜೀನಾಮೆ ಸಲ್ಲಿಸುತ್ತೇನೆ: ಸಿಎಂ ಯಡಿಯೂರಪ್ಪ
ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಎರಡು ವರ್ಷ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕೇಂದ್ರದ ನಾಯರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ನಡ್ಡಾ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದಿನ ಸಿಎಂಗೆ ಯಾರ ಹೆಸರನ್ನು ಸೂಚಿಸಿಲ್ಲ ಮತ್ತು ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದರು. ಇದೀಗ ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಎಂಬ ಕುತೂಹಲ ಹುಟ್ಟಿದೆ.