ಹಾಸನ: ಲಾರಿಯೊಂದು ಪಲ್ಟಿಯಾಗಿ ಮೂವರು ಸಜೀವ ದಹನವಾಗಿರುವ ಘಟನೆ ಅರಕಲಗೂಡು ತಾಲೂಕಿನ ಬಸವನಹಳ್ಳಿ ಪಡುವಲಹಿಪ್ಪೆ ರಸ್ತೆ ತಿರುವಿನಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಲಾರಿ ಚಾಲಕ ಪುಟ್ಟರಾಜು (42), ಪ್ರಮೋದ್ (18) ಹಾಗೂ ಪರಮೇಶ್ (40) ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಹಾಸನಕ್ಕೆ ಕೆಮಿಕಲ್ ಬಾಕ್ಸ್ ಗಳನ್ನು ಹೊತ್ತು ಬರುತ್ತಿದ್ದ ಲಾರಿ, ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಲಾರಿ ಉರುಳಿ ಬಿದ್ದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಲಾರಿಯೊಳಗಿದ್ದ ಮೂವರು ಸಜೀವ ದಹನವಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಚಾಲಕ ತನ್ನನ್ನು ತಾನು ರಕ್ಷಿಸಿಕೊಳ್ಳಲೆಂದು ಲಾರಿಯಿಂದ ಜಿಗಿದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೆಮಿಕಲ್ ದುರ್ವಾಸನೆಯಿಂದ ಲಾರಿ ಹತ್ತಿರ ಹೋಗಲು ಸಾಧ್ಯವಾಗದೆ ಪೊಲೀಸರು ಕ್ರೇನ್ ಗಾಗಿ ಕೆಲ ಕಾಲ ಕಾದಿದ್ದಾರೆ. ಅರಕಲಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.