ದಾವಣಗೆರೆ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಬೆದರಿ ಅಲ್ಲಿಂದ ಓಡಿ ಹೋಗುವಾಗ ಅಪಘಾತದಲ್ಲಿ ದಾರುಣವಾಗಿ ಹೋರಿಯೊಂದು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ನಡೆದಿದೆ.
ಕಡದಕಟ್ಟೆ ಗ್ರಾಮದಲ್ಲಿ ಇಂದು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಶಿಕಾರಿಪುರದ ಭ್ರಾತೇಶ್ ಎಂಬ ಹೋರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಹೋರಿ ಸ್ಥಳದಲ್ಲೇ ಅಸುನೀಗಿದೆ. ಹೀಗಾಗಿ ಬ್ರಾತೇಶ್ ಹೋರಿಯ ಮಾಲೀಕರು ಕಣ್ಣೀರು ಸುರಿಸಿದರು.
ಇದೇ ವೇಳೆ ಹೋರಿಗಳ ಸ್ಪರ್ಧೆ ಮುಗಿಸಿಕೊಂಡು ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಇದನ್ನು ಕಂಡು ಕಾರು ಇಳಿದು ಬಂದು ಹೋರಿ ಸಾವಿಗೆ ಸಂತಾಪ ವ್ಯಕ್ತಪಡಿಸಿ, ಮಾಲೀಕರಿಗೆ ಧೈರ್ಯ ಹೇಳಿದರು. ಹೋರಿ ಮಾಲೀಕರಿಗೆ ಆರ್ಥಿಕ ಸಹಾಯ ಮಾಡಿದರು.
ಅಲ್ಲದೆ ರೇಣುಕಾಚಾರ್ಯ ಕೂಡ ಇದೇ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಪಾಲ್ಗೊಂಡಿದ್ದು, ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಹೋರಿಯಿಂದ ತಿವಿಸಿಕೊಂಡಿದ್ದ ರೇಣುಕಾಚಾರ್ಯ. ಈ ಬಾರಿ ಕೂಡ ಹೋರಿಗಳ ಜೊತೆ ಫೋಟೋ ತೆಗೆಸಿಕೊಂಡು ರೇಣುಕಾಚಾರ್ಯ ಖುಷಿಪಟ್ಟರು. ರೇಣುಕಾಚಾರ್ಯರನ್ನ ಹೆಗಲ ಮೇಲೆ ಹೊತ್ತು ಗ್ರಾಮಸ್ಥರು ಮೆರವಣಿಗೆ ಮಾಡಿದರು.