– ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಂಬಂಧಿ
ಹೈದರಾಬಾದ್: ಸಂಬಂಧಿಯೊಬ್ಬರ ಅಂತಿಮ ದರ್ಶನ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಲಾರಿ ಮತ್ತು ಆಟೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದಾರೆ. ವೆಂಕಟರಮಣ (65), ಪಾರ್ವತಮ್ಮ (60), ಸುಜಾತಮ್ಮ (58), ರೆಡ್ಡಿ ಗೋವರ್ಧನಿ (21) ಮತ್ತು ದಾಮೋದರ್ ಮೃತ ದುರ್ದೈವಿಗಳು.
ಮೃತರು ಸಂಬಂಧಿಕರೊಬ್ಬರ ಅಂತಿಮ ದರ್ಶನ ಪಡೆಯಲು ಹೋಗಿದ್ದರು. ಅವರು ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಮುಗಿಸಿಕೊಂಡು ವಾಪಸ್ ಆಟೋದಲ್ಲಿ ಬರುತ್ತಿದ್ದರು. ಈ ವೇಳೆ ಚಿತ್ತೂರು ಜಿಲ್ಲೆಯ ಕೊತ್ತ ಗುಂಡ್ಲಪಲ್ಲಿ ವಯಲದಲ್ಲಿ ವೇಗವಾಗಿ ಬರುತ್ತಿದ್ದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ವೆಂಕಟರಮಣ, ಪರ್ವತಮ್ಮ, ಸುಜಾತಮ್ಮ ಮತ್ತು ರೆಡ್ಡಿ ಗೋವರ್ಧನಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಸ್ಥಳೀಯರು ಮತ್ತು ಪೊಲೀಸರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ದಾಮೋದರ್ ಮೃತಪಟ್ಟಿದ್ದಾರೆ.
ಸದ್ಯಕ್ಕೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ನೀಲಾವತಿ ಮತ್ತು ಪುಷ್ಪಾವತಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.