ಲಾಕ್‍ಡೌನ್ ವೇಳೆ 42 ಲೀಟರ್ ಎದೆಹಾಲು ದಾನ ಮಾಡಿದ ನಿರ್ಮಾಪಕಿ!

Public TV
2 Min Read
NIDHI PARMAR

– ನಿಧಿ ಪಾರ್ಮಾರ್ ಕಾರ್ಯಕ್ಕೆ ಭಾರೀ ಮೆಚ್ಚುಗೆ
– 60 ಮಕ್ಕಳ ಪಾಲಿಗೆ ನಿಧಿ ಸಂಜೀವಿನಿ

ಮುಂಬೈ: ಶಿಶುಗಳಿಗೆ ತಾಯಿಯ ಎದೆಹಾಲಿಗಿಂತ ಉತ್ತಮ ಆಹಾರ ಬೇರಾವುದೂ ಇಲ್ಲ. ಮಗುವಿಗೆ ಬೇಕಾಗಿರುವ ಪೌಷ್ಠಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ತಾಯಿ ಎದೆಹಾಲಿನಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದು, ಇದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಅಂತೆಯೇ ಇದೀಗ ಸಿನಿಮಾದ ನಿರ್ಮಾಪಕಿಯೊಬ್ಬರು 42 ಲೀಟರ್ ಎದೆಹಾಲು ದಾನ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

nidhi 1

ಹೌದು. ತಾಪ್ಸಿ ಪನ್ನು ಹಾಗೂ ಭೂಮಿ ಪೆಡ್ನೆಕರ್ ಅಭಿನಯದ ‘ಸಾಂಡ್ ಕೀ ಆಂಖ್’ ಎಂಬ ಬಾಲಿವುಡ್ ಸಿನಿಮಾದ ನಿರ್ಮಾಪಕಿ ನಿಧಿ ಪಾರ್ಮಾರ್ ಹೀರಾನಂದಾನಿ ಈ ಮಹಾನ್ ಕಾರ್ಯ ಮಾಡಿದವರು. ಇವರು ಕೊರೊನಾ ವೈರಸ್ ನಿಮಿತ್ತ ಲಾಕ್‍ಡೌನ್ ಆದ ಬಳಿಕ ಅಂದರೆ ಕಳೆದ ಮೇ ತಿಂಗಳಿನಿಂದ ಸುಮಾರು 42 ಲೀಟರ್ ಎದೆಹಾಲನ್ನು ದಾನ ಮಾಡಿದ್ದಾರೆ. ಈ ಮೂಲಕ ಎದೆಹಾಲು ಉಣಿಸಲು ಕಷ್ಟವಾಗುತ್ತಿರುವ ಬಾಣಂತಿಯರ ಮಕ್ಕಳಿಗೆ ಆಪದ್ಬಾಂಧವರಾಗಿದ್ದಾರೆ.

nidhi 4

ನಿಧಿ ಅವರು ಇದೇ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಅವರು ತಮ್ಮ ಶಿಶುವಿಗೆ ನೀಡುವ ಎದೆಹಾಲಿನ ಜೊತೆಗೆ ಇತರ ನವಜಾತ ಶಿಶುಗಳ ಸಹಾಯಕ್ಕೆ ಕೂಡ ಧಾವಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

nidhi 2

ಈ ಸಂಬಂಧ ಮಾತನಾಡಿರುವ ನಿಧಿ, ನನ್ನ ಮಗುವಿಗೆ ಎದೆಹಾಲು ಉಣಿಸಿದ ಬಳಿಕ ಸಾಕಷ್ಟು ಹಾಲು ಉಳಿದಿರುವುದನ್ನು ಅರಿತುಕೊಂಡೆ. ಅಲ್ಲದೆ ಫ್ರಿಡ್ಜ್ ನಲ್ಲಿ ಹಾಲನ್ನು ಶೇಖರಿಸಿಟ್ಟರೆ ಮೂರರಿಂದ ನಾಲ್ಕು ತಿಂಗಳ ಕಾಲ ಕೆಡುವುದಿಲ್ಲ ಎಂಬುದನ್ನು ನಾನು ಎಲ್ಲೋ ಓದಿದ ನೆನಪಿತ್ತು. ಹೀಗಾಗಿ ನನ್ನ ಮಗನಿಗೆ ಒಂದೂವರೆ ತಿಂಗಳು ಕಳೆದ ಬಳಿಕ ನಾನು ಹಾಲನ್ನು ಶೇಖರಿಸಿಡಲು ಆರಂಭಿಸಿದ್ದು, ಅದನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದರು.

nidhi 3

ಕೋವಿಡ್ 19 ಹಿನ್ನೆಲೆಯಲ್ಲಿ ಒಂದು ಆಸ್ಪತ್ರೆಯಲ್ಲಿ ನನ್ನ ನಿರ್ಧಾರವನ್ನು ಅಲ್ಲಿನ ಸಿಬ್ಬಂದಿ ಒಪ್ಪಲಿಲ್ಲ. ಬಳಿಕ ನಾನು ಬಾಂದ್ರಾದ ಮಹಿಳಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರನ್ನು ಸಂಪರ್ಕ ಮಾಡಿದೆ. ಅವರ ಸಲಹೆಯ ಮೇರೆಗೆ ಆಸ್ಪತ್ರೆಯೊಂದಕ್ಕೆ ಹಾಲು ದಾನ ಮಾಡಿದೆ. ಆಸ್ಪತ್ರೆಯಲ್ಲಿ ಎದೆಹಾಲು ಉಣಿಸಲು ಕಷ್ಟಪಡುತ್ತಿದ್ದ ಬಾಣಂತಿಯರ ಕಂದಮ್ಮಗಳಿಗೆ ಹಾಲು ಒದಗಿಸುತ್ತಿದ್ದಾರೆ. ಈ ಮೂಲಕ ಬರೋಬ್ಬರಿ 60 ಮಕ್ಕಳ ಪಾಲಿಗೆ ನಿಧಿ ಅನ್ನಪೂರ್ಣಿಯಾಗಿದ್ದಾರೆ. ಅಲ್ಲದೆ ಎದೆಹಾಲು ಪಡೆದ ಮಕ್ಕಳ ದುರ್ಬಲ ಆರೋಗ್ಯ ಸ್ಥಿತಿ ಕಂಡು ಮುಂದಿನ ಒಂದು ವರ್ಷವರೆಗೂ ಇದೇ ರೀತಿಯಲ್ಲಿ ಎದೆಹಾಲು ದಾನ ಮಾಡುವುದಾಗಿ ನಿಧಿ ಘೋಷಿಸಿದ್ದಾರೆ.

Untitled 2

Share This Article
Leave a Comment

Leave a Reply

Your email address will not be published. Required fields are marked *