– ಪತಿಯ ಮನೆಯಲ್ಲಿದ್ದ ಹಣ, ಚಿನ್ನದ ಮೇಲೆ ಕಣ್ಣು
– ಸಿಕ್ಕಿಬಿದ್ದ ಗಂಡ, ಪತ್ನಿ ನಾಪತ್ತೆ
ಚೆನ್ನೈ: ತಮಿಳು ಕಿರುತೆರೆಯ ಖ್ಯಾತ ನಟಿ ಸುಚಿತ್ರಾ ಮತ್ತು ಆಕೆಯ ಪತಿ ತಮ್ಮ ಸ್ವಂತ ಮನೆಯಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಣಿಕಂಠನ್ ತನ್ನ ಪತ್ನಿ ಸುಚಿತ್ರಾ ಜೊತೆ ಸೇರಿಕೊಂಡು ಸ್ವಂತ ಮನೆಯನ್ನೇ ದೋಚಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ನಟಿ ಸುಚಿತ್ರಾ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದ ಸಂದರ್ಭದಲ್ಲಿ ಮಣಿಕಂಠನ್ ಎಂಬಾತನ ಜೊತೆ ಮದುವೆಯಾಗಿದ್ದಳು. ನಂತರ ನವದಂಪತಿ ಮಣಿಕಂಠನ್ ಮನೆಗೆ ಹೋಗಿದ್ದಾರೆ. ಅಲ್ಲಿ ಪೋಷಕರು ಮೊದಲಿಗೆ ಅವರ ಮದುವೆಯನ್ನು ಒಪ್ಪಿಕೊಂಡಿರಲಿಲ್ಲ. ನಂತರ ಎಲ್ಲರೂ ಒಪ್ಪಿಕೊಂಡು ಇಬ್ಬರನ್ನೂ ಮನೆಗೆ ಸೇರಿಸಿಕೊಂಡಿದ್ದಾರೆ.
ಸುಚಿತ್ರಾ ಪತಿಯ ಮನೆಯಲ್ಲಿರುವ ಹಣ ಮತ್ತು ಆಭರಣಗಳನ್ನು ನೋಡಿ ಇಷ್ಟಪಟ್ಟಿದ್ದಳು. ಕೊರೊನಾದಿಂದ ಕೆಲಸವಿಲ್ಲದೇ ಇಬ್ಬರಿಗೂ ಹಣದ ಸಮಸ್ಯೆ ಎದುರಾಗಿದೆ. ಮನೆಯಲ್ಲಿ ಕೇಳಿದರೂ ಕೊಡುವುದಿಲ್ಲ ಎಂದು ಈ ಜೋಡಿ ಮಾಸ್ಟರ್ ಪ್ಲಾನ್ ಮಾಡಿದೆ. ಕೊನೆಗೆ ಮನೆಯಲ್ಲಿರುವ ಹಣ, ಒಡವೆಯನ್ನು ದೋಚಲೂ ಇಬ್ಬರು ನಿರ್ಧರಿಸಿದ್ದರು ಎಂದು ವರದಿಯಾಗಿದೆ.
ಅದರಂತೆಯೇ ನನಗೆ ಕೆಲಸ ಇದೆ ಎಂದು ನಟಿ ಸುಚಿತ್ರಾ ಚೆನ್ನೈನಿಂದ ಹೋಗಿದ್ದಾಳೆ. ಇತ್ತ ಕಳ್ಳತನ ಮಾಡಲೂ ಪತಿ ಮಣಿಕಂಠನ್ ಮನೆಯಲ್ಲಿಯೇ ಉಳಿದುಕೊಂಡಿದ್ದನು. ನಂತರ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾನೆ. ಮನೆಯಲ್ಲಿ ಕಳ್ಳತನವಾದ ವಿಚಾರ ತಿಳಿದು ಮಣಿಕಂದನ್ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮಾಡಿದ ಪೊಲೀಸರಿಗೆ ಮನೆಯವರೇ ಕದ್ದಿರುವ ವಿಚಾರ ತಿಳಿದಿದೆ. ತಕ್ಷಣ ಮಣಿಕಂಠನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಬಳಿ ಮಣಿಕಂದನ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಸುಚಿತ್ರಾ ನಾಪತ್ತೆಯಾಗಿದ್ದಾಳೆ. ಸುಚಿತ್ರಾ ತಮಿಳು ಧಾರಾವಾಹಿಗಳ ಮೂಲಕ ಜನಪ್ರಿಯವಾದ ನಟಿ. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಧಾರಾವಾಹಿ ಚಿತ್ರೀಕರಣ ಸ್ಥಗಿತವಾಗಿತ್ತು. ಈ ಸಂದರ್ಭದಲ್ಲಿ ಮಣಿಕಂದನ್ ಪರಿಚಯವಾಗಿ ಇಬ್ಬರು ಪ್ರೀತಿಸಿ ಮದವೆಯಾಗಿದ್ದಾರೆ ಎಂದು ತಿಳಿದುಬಂದಿದೆ.