– ಅಕ್ಕ, ತಂಗಿಯನ್ನು ವರಿಸಿದ್ದವನ ಬಂಧನ
ಕೋಲಾರ: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಗಡಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ. ಕೊರೊನಾ ಸಂಕಷ್ಟದ ಮಧ್ಯೆ ಲಾಕ್‍ಡೌನ್‍ನ್ನೇ ಬಂಡವಾಳ ಮಾಡಿಕೊಂಡ ಪೋಷಕರು, ಪುಟ್ಟ ಮಕ್ಕಳಿಗೆ ಮದುವೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 96 ಪ್ರಕರಣಗಳನ್ನು ಗುರುತಿಸಿದ್ದು, 5 ಬಾಲ್ಯ ವಿವಾಹ ಕುರಿತು ದೂರು ದಾಖಲಾಗಿವೆ.
ಕಳೆದ ಒಂದು ವರ್ಷದಿಂದ ಲಾಕ್‍ಡೌನ್ ಸಂದರ್ಭದಲ್ಲಿ ಒಟ್ಟು 96 ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆದಿದ್ದು, ಅದರಲ್ಲಿ 5 ಬಾಲ್ಯ ವಿವಾಹ ಪ್ರಕರಣಗಳು ಕೋಲಾರ ಜಿಲ್ಲೆಯಲ್ಲಿ ದಾಖಲಾಗಿವೆ. ಲಾಕ್‍ಡೌನ್‍ನ್ನೇ ಬಂಡವಾಳ ಮಾಡಿಕೊಂಡು ಮಕ್ಕಳ ಮದುವೆ ಮಾಡಲು ಮುಂದಾಗಿದ್ದರು. ಮೊದಲ ಹಂತದ ಲಾಕ್‍ಡೌನ್ ವೇಳೆ 84 ಬಾಲ್ಯ ವಿವಾಹ ಪ್ರಕರಣಗಳಲ್ಲಿ 80 ಮಕ್ಕಳನ್ನು ರಕ್ಷಣೆ ಮಾಡಿದ್ದು, 4 ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಕೊರೊನಾ ಎರಡನೇ ಅಲೆ ಲಾಕ್‍ಡೌನ್ ನಲ್ಲಿ 12 ಪ್ರಕರಣಗಳಲ್ಲಿ 11 ಮಕ್ಕಳನ್ನು ರಕ್ಷಣೆ ಮಾಡಿದ್ದು, 1 ಪ್ರಕರಣದಲ್ಲಿ ಶಿಕ್ಷೆಯಾಗಿದೆ.
ಮುಳಬಾಗಿಲು ತಾಲೂಕಿನ ವೇಗಮಡಗು ಗ್ರಾಮದಲ್ಲಿ ಸಿನಿಮಾ ಸ್ಟೈಲ್‍ನಂತೆ ಒಂದೇ ಮಂಟಪದಲ್ಲಿ ಅಕ್ಕ ಮತ್ತು ತಂಗಿ ಇಬ್ಬರನ್ನೂ ಮದುವೆಯಾಗಿದ್ದ ಇಬ್ಬರ ಹೆಂಡತಿಯರ ಮುದ್ದಿನ ಗಂಡ ಉಮಾಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಜಿಲ್ಲೆಯ ಮುಳಬಾಗಿಲು ತಾಲೂಕು ವೇಗಮಡಗು ಗ್ರಾಮದ ಉಮಾಪತಿ ಮೇ-7 ರಂದು ಅಕ್ಕ, ತಂಗಿಯರಿಬ್ಬರನ್ನೂ ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯನಾಗಿದ್ದ. ಅಕ್ಕ, ತಂಗಿಯರನ್ನು ಮದುವೆಯಾದ ಭೂಪನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತನಿಖೆಗೆ ಮುಂದಾಗಿತ್ತು, ಈ ವೇಳೆ ಉಮಾಪತಿಯ ನಿಜ ಬಣ್ಣ ಬಯಲಾಗಿದೆ.
ತನಿಖೆ ವೇಳೆ ತಂಗಿ ಅಪ್ರಾಪ್ತೆ ಎನ್ನುವ ವಿಷಯ ತಿಳಿದು ಬಂದಿದೆ. 2005ರಲ್ಲಿ ಜನಿಸಿದ್ದ ಲಲಿತಾಳನ್ನು ಮದುವೆಯಾಗಿದ್ದಕ್ಕೆ ಪ್ರಕರಣ ದಾಖಲಿಸಿಕೊಂಡ ಮುಳಬಾಗಲಿನ ನಂಗಲಿ ಪೊಲೀಸರು, ಉಮಾಪತಿಯನ್ನು ಬಂಧಿಸಿದ್ದಾರೆ. ವರ ಉಮಾಪತಿ, 4 ಜನ ಪೋಷಕರು, ಅರ್ಚಕ, ಮದುವೆ ಆಮಂತ್ರಣ ಮುದ್ರಕ ಸೇರಿ ಏಳು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಕ್‍ಡೌನ್‍ನ್ನೇ ಬಂಡವಾಳ ಮಾಡಿಕೊಂಡ ಗ್ರಾಮೀಣ ಭಾಗದ ಬಹುತೇಕ ಜನರು, ಶಾಲಾ, ಕಾಲೇಜುಗಳಿಗೆ ರಜೆ ಇದ್ದು ಮಕ್ಕಳಿಗೆ ಮದುವೆ ಮಾಡಿ ಜವಬ್ದಾರಿ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಲಾಕ್‍ಡೌನ್ ಎನ್ನಲಾಗುತ್ತಿದ್ದು, ಇದರಲ್ಲಿ ತಮ್ಮ ತಪ್ಪೇನು ಇಲ್ಲ, ಆಕೆಗೆ ಬಾಯಿ ಇಲ್ಲ ಮೂಗಿಯಾಗಿದ್ದು, ಇಬ್ಬರಿಗೂ ಮದುವೆ ಮಾಡಬೇಕಾದ ಅನಿವಾರ್ಯ ಇದ್ದ ಕಾರಣ ಮದುವೆ ಮಾಡಿದ್ದೇವೆ ಎಂದು ಪೋಷಕರು ಸಮರ್ಥಿಸಿಕೊಂಡಿದ್ದಾರೆ.